ಉಡುಪಿ ವಿಡಿಯೋ ಪ್ರಕರಣ: ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು
ಉಡುಪಿ, ಜುಲೈ, 28: ಉಡುಪಿಯ ಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಈ ಪ್ರಕರಣದ ಆರೋಪ ಎದುರಿಸುತ್ತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಇದೀಗ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ಉಡುಪಿಯ ನೇತ್ರಾ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಮೂವರು ವಿದ್ಯಾರ್ಥಿನಿಯರ ವಿರುದ್ಧ ಸಿಮೊಟೋ ಕೇಸ್ ದಾಖಲಿಸಿದ್ದರು. ಆದರೆ ಇದೀಗ ಈ ಮೂವರು ವಿದ್ಯಾರ್ಥಿನಿಯರಿಗೆ ನ್ಯಾಯಾಲಯವು ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 509,204,175,34 ಐಪಿಸಿ ಮತ್ತು 66(ಇ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಸಲಾಗಿತ್ತು. ನಂತರ ನಿರೀಕ್ಷಣಾ ಜಾಮೀನು ಕೋರಿ ವಿದ್ಯಾರ್ಥಿನಿಯರು ನ್ಯಾಯಲಯಕ್ಕೆ ಮನವಿ ಸಲ್ಲಿದ್ದರು. ಇಂದು ಉಡುಪಿಯ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ವಿದ್ಯಾರ್ಥಿನಿಯರು ವಿಚಾರಣೆಗೆ ಹಾಜರಾಗಿದ್ದು, ಈ ವೇಳೆ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಹಾಗೆಯೇ ತನಿಖಾಧಿಕಾರಿಗಳಿಗೆ ತನಿಖೆಗೆ ಸಹಕರಿಸಬೇಕು. ವಿಚಾರಣೆ ದಿನ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಸಾಕ್ಷಿಗಳಿಗೆ ಯಾವುದೇ ಬೆದರಿಕೆಯೊಡ್ಡಬಾರದು ಮತ್ತು ತಲಾ 20,000 ರೂಪಾಯಿ ಮೊತ್ತದ ಬಾಂಡ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶ ನೀಡಿದೆ. ಉಡುಪಿಯ ನ್ಯಾಯವಾದಿ ಅಸದುಲ್ಲಾ ಕಟಪಾಡಿ ಅವರು ಆರೋಪಿಗಳ ಪರ ವಾದ ಮಂಡನೆ ಮಾಡಿದ ವಕೀಲರಾಗಿದ್ದಾರೆ.












Click it and Unblock the Notifications