ಕಾಣೆಯಾಗಿದ್ದ ತಂದೆ ಮತ್ತು ಮಗಳ ಶವ ಬಾವಿಯಲ್ಲಿ ಪತ್ತೆ
ಉಡುಪಿ, ಆಗಸ್ಟ್ 31: ಬುಧವಾರ ಮನೆಯಿಂದ ಏಕಾಏಕಿ ಕಾಣೆಯಾಗಿದ್ದ ತಂದೆ ಮತ್ತು ಮಗಳ ಶವ ಇಂದು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಹೊರವಲಯದ ಮಲ್ಪೆಯ ಕೊಡವೂರು ಎಂಬಲ್ಲಿನ ನಿವಾಸಿ ಶರತ್ (38) ಹಾಗೂ ಪುಟ್ಟ ಮಗಳು ಕನ್ನಿಕಾ (8) ನಿನ್ನೆ ಸಂಜೆಯಿಂದ ಕಾಣೆಯಾಗಿದ್ದರು.

ಮನೆಯಿಂದ ನಾಪತ್ತೆಯಾಗಿದ್ದ ತಂದೆ ಹಾಗೂ ಮಗಳನ್ನು ಕುಟುಂಬಸ್ಥರು ಹಾಗೂ ಸ್ನೇಹಿತರು ಎಲ್ಲೆಡೆ ಹುಡುಕಾಡಿದ್ದರು. ಆದರೆ, ತಂದೆ ಶರತ್ ಹಾಗೂ ಮಗಳು ಕನ್ನಿಕಾ ಎಲ್ಲಿಯೂ ಪತ್ತೆಯಾಗಿರಲಿಲ್ಲ .
ಇಂದು ಮುಂಜಾನೆ ಕೊಡವೂರಿನ ಮನೆಯ ಸಮೀಪದ ಬಾವಿಯೊಂದರಲ್ಲಿ ತಂದೆ ಶರತ್ ಹಾಗೂ ಮಗಳು ಕನ್ನಿಕಾ ಶವ ಪತ್ತೆಯಾಗಿದೆ. ಬಾವಿಯಿಂದ ಶವಗಳನ್ನು ಮೇಲಕ್ಕೆತ್ತಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ಹಲವಾರು ದಿನಗಳಿಂದ ಶರತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ .ಈ ಘಟನೆ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications