ಮಣಿಪಾಲ್ ಗ್ಯಾಂಗ್ ರೇಪ್ ಕೇಸ್ : ಮೂವರಿಗೆ ಜೀವಾವಧಿ ಶಿಕ್ಷೆ
ಮಣಿಪಾಲ್, ಅಕ್ಟೋಬರ್ 15 : ಎರಡು ವರ್ಷಗಳ ಹಿಂದೆ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ನಡೆಸಿದ ಮೂವರು ಅಪರಾಧಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. 2013ರ ಜೂನ್ 20ರಂದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.
ಗುರುವಾರ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಿಸಿರುವ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಪ್ರಮುಖ ಆರೋಪಿಗಳಾದ ಯೋಗೇಶ್, ಆನಂದ್ ಮತ್ತು ಹರಿಪ್ರಸಾದ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 1.10 ಲಕ್ಷ ರೂಪಾಯಿ ದಂಡ ವಿಧಿಸಿದೆ. [ಮಣಿಪಾಲ್ ರೇಪ್: ಮೂವರು ಪಾತಕಿಗಳು ಇವರೇ]

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ನಾಶ ಪಡಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಬಾಲಚಂದ್ರ ಮತ್ತು ಹರೀಂದ್ರ ಅವರಿಗೆ 3 ವರ್ಷದ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂಪಾಯಿ ದಂಡವನ್ನು ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. [ಮಣಿಪಾಲ ಗ್ಯಾಂಗ್ ರೇಪ್: ವಿದ್ಯಾರ್ಥಿಗಳ ತೀವ್ರ ಆಕ್ರೋಶ]
ಘಟನೆ ವಿವರ : 2013ರ ಜೂನ್ 20ರಂದು ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಟೋ ರಿಕ್ಷಾದಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿ, ನಂತರ ಹಾಸ್ಟೆಲ್ ಗೇಟ್ ಬಳಿ ತಂದು ಬಿಟ್ಟು ಪರಾರಿಯಾಗಿದ್ದರು.
ಈ ಘಟನೆ ಖಂಡಿಸಿ ರಾಜ್ಯದಲ್ಲಿ ಸರಣಿ ಪ್ರತಿಭಟನೆಗಳು ನಡೆದಿದ್ದವು. ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆ ನಡೆಸಲಾಗಿತ್ತು. ಐವರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿತ್ತು.












Click it and Unblock the Notifications