ಮಂಗಳೂರು-ಉಡುಪಿ ಮಧ್ಯೆ ಶೀಘ್ರದಲ್ಲೇ ಮೆಟ್ರೋ ರೈಲು?
ಉಡುಪಿ, ಮಾರ್ಚ್ 05: ಮೆಟ್ರೋ ಸಾರಿಗೆ ಸದ್ಯ ಪ್ರಯಾಣಿಕರ ಮೆಚ್ಚಿನ ಆಯ್ಕೆಯಾಗಿದೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಬಹುತೇಕರು ನಮ್ಮ ಮೆಟ್ರೋ ಸಂಚಾರವನ್ನೇ ಮೊದಲ ಆಯ್ಕೆಯಾಗಿ ತೆಗೆದುಕೊಳ್ಳುತ್ತಾರೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿಸಲು ಪ್ರತಿನಿತ್ಯ ಬೆಂಗಳೂರಿನ ಲಕ್ಷಾಂತರ ಜನರು ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಸಾರಿಗೆ ಯಶಸ್ವಿಯಾಗುತ್ತಿದ್ದಂತೆ ಇದೀಗ ಕರ್ನಾಟಕ ರಾಜ್ಯದ ಮತ್ತೊಂದು ಭಾಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ವಿಸ್ತಾರ ಪ್ರಸ್ತಾವನೆಯಲ್ಲಿ ಇರುವಾಗಲೇ ಇದೀಗ ಕರಾವಳಿ ಭಾಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ಸೂಚನೆ ಸಿಗುತ್ತಿದೆ. ಹೌದು ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವ ಸುದ್ದಿ ಹರಿದಾಡುತ್ತಿದ್ದು, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ.

ಮಂಗಳೂರು- ಮಣಿಪಾಲ ಹಾಗೂ ಉಡುಪಿ ನಗರಗಳ ಮಧ್ಯೆ ಇಂಟರ್ ಸಿಟಿ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ ಸರಿ ಸುಮಾರು 60 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ತಾಂತ್ರಿಕ ಹಾಗೂ ಆರ್ಥಿಕ ಸಂಕ್ಷಿಪ್ತ ಟಿಪ್ಪಣಿ ಹಾಗೂ ವಿಸ್ತೃತ ಯೋಜನಾ ವರದಿಯನ್ನು ರೂಪಿಸುವಂತೆ ರಾಜ್ಯ ಸರಕಾರ ಬೆಂಗಳೂರು ಮೆಟ್ರೋ ರೈಲು ನಿಗಮ(BMRCL)ಗೆ ಸೂಚಿಸಿದೆ. ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದೆ.
ಇನ್ನು ಮಂಗಳೂರು- ಉಡುಪಿ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಕೈಗೊಳ್ಳುವ ಬಗ್ಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದರು. ಇದೀಗ ಈ ಪ್ರಸ್ತಾವನೆಯ ಬಗ್ಗೆ ಚರ್ಚೆ ಆರಂಭವಾಗಿದ್ದು, ಶೀಘ್ರದಲ್ಲೇ ಮಂಗಳೂರು- ಮಣಿಪಾಲ ಹಾಗೂ ಉಡುಪಿ ನಗರಗಳ ಮಧ್ಯೆ ಇಂಟರ್ ಸಿಟಿ ಮೆಟ್ರೋ ರೈಲು ಸಂಪರ್ಕ ಕಾರಿಡಾರ್ ಹಂತ-1ರ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.












Click it and Unblock the Notifications