ಬೆಂಗಳೂರು-ಮಣಿಪಾಲ್ ನಡುವೆ ಕೆಎಸ್ಆರ್‌ಟಿಸಿ ಫ್ಲೈ ಬಸ್
ಮಣಿಪಾಲ್, ಜೂ.06 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರಿಗೆ ಫ್ಲೈ ಬಸ್ ಸೇವೆ ಆರಂಭಿಸಿದ್ದ ಕೆಎಸ್ಆರ್‌ಟಿಸಿ, ಸದ್ಯ ಈ ಬಸ್ ಸೇವೆಯನ್ನು ಮಣಿಪಾಲ್‌ಗೆ ವಿಸ್ತರಿಸಲು ಮುಂದಾಗಿದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮೈಸೂರಿಗೆ ಆರಂಭಿಸಿರುವ ಫ್ಲೈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನಲೆಯಲ್ಲಿ, ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಕಠಾರಿಯಾ ತಿಳಿಸಿದ್ದಾರೆ. [ಬೆಂಗಳೂರು-ಮೈಸೂರು ನಡುವೆ ಫ್ಲೈ ಬಸ್]

ಮಣಿಪಾಲ್‌ಗೆ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದ್ದರಿಂದ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಣಿಪಾಲ್‌ಗೆ ಫ್ಲೈ ಬಸ್ ಸೇವೆ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ. ಐಷಾರಾಮಿ ವೋಲ್ವೊ ಬಸ್‌ಗಳನ್ನು ಈ ಮಾರ್ಗದಲ್ಲಿ ಓಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. [ಕೆಎಸ್ ಆರ್ ಟಿಸಿ ವೆಬ್ ಸೈಟ್]
ಮಣಿಪಾಲ್‌ಗೆ ಮಂಗಳೂರು ವಿಮಾನ ನಿಲ್ದಾಣ ಹತ್ತಿರವಿದೆ. ಆದರೆ, ಅಲ್ಲಿ ಹಾರಾಟ ನಡೆಸುವ ವಿಮಾನಗಳ ಸಂಖ್ಯೆ ಕಡಿಮೆ. ಬೆಂಗಳೂರು ವಿಮಾನ ನಿಲ್ದಾಣದಿಂದ ನೂರಾರು ಜನರು ಮಣಿಪಾಲ್‌ಗೆ ಪ್ರಯಾಣಿಸುತ್ತಾರೆ. ಅವರ ಅನುಕೂಲಕ್ಕಾಗಿ ಈ ಸೇವೆ ಆರಂಭಿಸಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ.
ಕೆಎಸ್ಆರ್‌ಟಿಸಿ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ವಿಮಾನಗಳ ಸಮಯ, ಪ್ರಯಾಣಿಕರ ಸಂಖ್ಯೆ ಮುಂತಾದ ವಿವರಗಳನ್ನು ಕೇಳಿದೆ. ಎಲ್ಲಾ ವಿವರಗಳನ್ನು ಸಂಗ್ರಹಿಸಿದ ನಂತರ ಸುಮಾರು 400 ಕಿ.ಮೀ. ಮಾರ್ಗದಲ್ಲಿ ಫ್ಲೈ ಬಸ್ ಸೇವೆ ಆರಂಭಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ.












Click it and Unblock the Notifications