ಹಿಜಾಬ್ ವಿವಾದ: ಉಡುಪಿ ಕಾಲೇಜಿನಿಂದ ಮುಸ್ಲಿಂ ವಿದ್ಯಾರ್ಥಿನಿಯರ ನಂಬರ್, ವಿಳಾಸ ಸೋರಿಕೆ!?
ಉಡುಪಿ, ಫೆಬ್ರವರಿ 10: ಉಡುಪಿ ಕಾಲೇಜಿನಲ್ಲಿ ಶುರುವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕರ್ನಾಟಕದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಅಲ್ಲದೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿದ್ಯಾರ್ಥಿಗಳ ನಡುವೆ ಶುರುವಾದ ವಿವಾದ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿ ಪದವಿ ಪೂರ್ವ ಕಾಲೇಜಿನಿಂದ ಆರು ಮುಸ್ಲಿಂ ವಿದ್ಯಾರ್ಥಿನಿಯರ ನಂಬರ್ ಮತ್ತು ವಿಳಾಸ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಲಿಯಾ ಅಸ್ಸಾದಿ ಎಂಬ ಮುಸ್ಲಿಂ ವಿದ್ಯಾರ್ಥಿನಿ ಫೆಬ್ರವರಿ 9ರ ಬುಧವಾರದಂದು ದಿನವಿಡೀ ನಿಂದನೀಯ ಫೋನ್ ಕರೆಗಳನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಉಲ್ಬಣಗೊಂಡ ನಂತರ ಉಡುಪಿ ಜಿಲ್ಲೆಯಲ್ಲಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಫೋನ್ ನಂಬರ್‌ಗಳು, ಪೋಷಕರ ಹೆಸರುಗಳು ಮತ್ತು ಮನೆಯ ವಿಳಾಸ ಸೇರಿದಂತೆ ತನ್ನ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲಾಗಿದೆ ಎಂದು 17 ವರ್ಷ ವಯಸ್ಸಿನ ಅಲಿಯಾ ಅಸ್ಸಾದಿ ಹೇಳಿದ್ದಾರೆ.

ಕರ್ನಾಟಕದ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ಮುಂದುವರಿಸುವ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಅಲಿಯಾ ಅಸ್ಸಾದಿ ಕೂಡ ಒಬ್ಬರು.
ಬುಧವಾರದಂದು ಎಲ್ಲಾ ಆರು ವಿದ್ಯಾರ್ಥಿಗಳ ಕಾಲೇಜು ಪ್ರವೇಶ ಪತ್ರಗಳು ಪದವಿ ಪೂರ್ವ ಕಾಲೇಜಿನಿಂದ ಸೋರಿಕೆಯಾಗಿದ್ದು, ಅದರಲ್ಲಿ ವಿದ್ಯಾರ್ಥಿನಿಯರ ಹೆಸರುಗಳು ಮತ್ತು ಫೋಟೋಗಳಿಂದ ಗುರುತಿಸಬಹುದು.
ಸಂದೇಶಗಳು, ಪಿಡಿಎಫ್ ಡಾಕ್ಯುಮೆಂಟ್, ಕಾಲೇಜಿನ ಲೆಡ್ಜರ್‌ನಿಂದ ಪ್ರವೇಶ ಫಾರ್ಮ್‌ಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿದ್ದು, ಇದು ಶಿಕ್ಷಣ ಸಂಸ್ಥೆಯೊಳಗಿಂದ ಸೋರಿಕೆಯಾಗಿದೆ ಎಂದು ಸೂಚಿಸುತ್ತದೆ.
ಕಾಲೇಜಿನ ಅಭಿವೃದ್ಧಿ ಸಮಿತಿಯ (ಸಿಡಿಸಿ) ಅಧ್ಯಕ್ಷ, ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಅವರು ಡಿಸೆಂಬರ್ 2021ರಿಂದ ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಅನುಮತಿಸುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಪ್ರವೇಶ ದಾಖಲೆಗಳನ್ನು ಕಾಲೇಜಿಗೆ ಮಾತ್ರ ಸಲ್ಲಿಸಲಾಗಿದೆ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಸ್ಪಷ್ಟಪಡಿಸಿದ್ದಾರೆ.

ವಿಸ್ತೃತ ಪೀಠದಲ್ಲಿ ಹಿಜಾಬ್ ಅರ್ಜಿ ವಿಚಾರಣೆ
ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಶೇಷ ಪೀಠ ರಚನೆ ಮಾಡಲಾಗಿದೆ.
ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದರು.
ಈಗ ಅರ್ಜಿಗಳ ವಿಚಾರಣೆಗೆ ವಿಶೇಷ ಪೂರ್ಣ ಪೀಠವನ್ನು ರಚನೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣ ಪೀಠ ಗುರುವಾರ ಮಧ್ಯಾಹ್ನ 2.30ರಿಂದ ಅರ್ಜಿ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಇದ್ದು, ಇಂದು ಮಧ್ಯಾಹ್ನವೇ ವಿಚಾರಣೆ ಆರಂಭವಾಗಲಿದೆ.












Click it and Unblock the Notifications