ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ: ಮರಾಠ ವೀರನಿಗೆ ಅಂತಾರಾಷ್ಟ್ರೀಯ ಗೌರವ

ಇಸ್ರೇಲ್‌ ಭಾರತ-ಇಸ್ರೇಲ್ ಸ್ನೇಹದ ಸಂಕೇತವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ದೇಶದ ಪ್ರಮುಖ ನಗರವೊಂದರಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಮುಂಬೈಯಲ್ಲಿರುವ ಇಸ್ರೇಲ್‌ನ ಕಾನ್ಸುಲ್ ಜನರಲ್ ಯಾನಿವ್ ರಿವಾಚ್ ಅವರು ಶಿವರಾಜ್ಯಾಭಿಷೇಕ ದಿನದಂದು ಈ ನಿರ್ಧಾರವನ್ನು ಪ್ರಕಟಿಸಿದ್ದು, ಆ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಗೌರವ ದೊರೆತಿದೆ. ಮರಾಠಾ ಸಾಮ್ರಾಜ್ಯದ ಸ್ಥಾಪಕ ಹಾಗೂ ಶೂರ ಯೋಧರಾದ ಛತ್ರಪತಿ ಶಿವಾಜಿ ಮಹಾರಾಜ್ ಗೌರವಾರ್ಥವಾಗಿ ಇಸ್ರೇಲ್ ಸರ್ಕಾರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದೆ.

ಸ್ನೇಹದ ದ್ಯೋತಕವಾಗಿ ತೆಗೆದುಕೊಂಡ ಈ ನಿರ್ಧಾರದ ಹಿಂದೆ ಮಹತ್ವದ ಐತಿಹಾಸಿಕ ಹಿನ್ನೆಲೆಯೂ ಇದೆ. 1918ರಲ್ಲಿ ನಡೆದ ಐತಿಹಾಸಿಕ Battle of Haifa ಯುದ್ಧದಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯವನ್ನು ಸ್ಮರಿಸುವ ಉದ್ದೇಶದಿಂದ ಇಂಥದ್ದೊಂದು ಕಾರ್ಯಕ್ಕೆ ಇಸ್ರೇಲ್ ಮುಂದಾಗಿದೆ. ಇದರಿಂದ ಭಾರತ ಮತ್ತು ಇಸ್ರೇಲ್ ನಡುವಿನ ಐತಿಹಾಸಿಕ ಹಾಗೂ ರಾಜತಾಂತ್ರಿಕ ಬಾಂಧವ್ಯ ಮತ್ತಷ್ಟು ವೃದ್ಧಿಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

Chhatrapati Shivaji Maharaj Statue

ಈ ಯೋಜನೆ ಕೇವಲ ಪ್ರತಿಮೆ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೇ ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳ ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ದೀರ್ಘಕಾಲೀನ ಸಾಂಸ್ಕೃತಿಕ ಯೋಜನೆ ಎಂದೇ ಪರಿಗಣಿಸಲಾಗಿದೆ. ಶಿವಾಜಿ ಮಹಾರಾಜರ ಪರಂಪರೆಗೆ ತಕ್ಕ ಗೌರವ ದೊರಕುವಂತೆ ಪ್ರತಿಮೆಯ ವಿನ್ಯಾಸ, ಐತಿಹಾಸಿಕ ಉಲ್ಲೇಖಗಳು ಹಾಗೂ ಕಲಾತ್ಮಕ ಮಾರ್ಗದರ್ಶನಕ್ಕಾಗಿ ಇಸ್ರೇಲ್ ಸರ್ಕಾರವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರಿ ಫಡ್ನಾವೀಸ್ ಅವರ ಸಹಕಾರವನ್ನು ಕೋರಿದ್ದು, ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಬೆಂಬಲಿಸುವುದಾಗಿಯೂ ಭರವಸೆ ನೀಡಿದೆ.

ಶಿವಾಜಿ ಇಸ್ರೇಲ್‌ಗೆ ಏಕೆ ಮುಖ್ಯ?

ಒಟ್ಟೋಮನ್ ಸಾಮ್ರಾಜ್ಯದ ನಿಯಂತ್ರಣದಲ್ಲಿದ್ದ ಹೈಫಾ ನಗರವನ್ನು ಮುಕ್ತಗೊಳಿಸುವಲ್ಲಿ ಭಾರತೀಯ ಅಶ್ವದಳದ ಸೈನಿಕರು ಅಂದು ಮಹತ್ವದ ಪಾತ್ರ ವಹಿಸಿದ್ದರು. ಶಿವಾಜಿ ಮಹಾರಾಜರು ಅನುಸರಿಸಿದ್ದ ಗೆರಿಲ್ಲಾ ಯುದ್ಧತಂತ್ರ ಮತ್ತು ಸೈನಿಕ ತತ್ವಗಳು ಭಾರತೀಯ ಸೈನಿಕರಿಗೆ ಸ್ಫೂರ್ತಿಯಾಗಿದ್ದವು. ಈ ಕಾರಣದಿಂದಲೇ ಇಸ್ರೇಲ್ ಸರ್ಕಾರವು ಅವರಿಗೆ ಗೌರವ ಸೂಚಿಸಲು ಈ ನಿರ್ಧಾರ ಕೈಗೊಂಡಿದೆ.

ಇಸ್ರೇಲ್‌ನಲ್ಲಿ ಒಬ್ಬ ಭಾರತೀಯ ರಾಜನ ಪ್ರತಿಮೆಯನ್ನು ಸ್ಥಾಪಿಸುವುದು ಇದೇ ಮೊದಲು. ಈ ಯೋಜನೆ ಉಭಯ ರಾಷ್ಟ್ರಗಳ ಸಾಂಸ್ಕೃತಿಕ ಬಾಂಧವ್ಯದ ಸಂಕೇತವಾಗಿದ್ದು, ವಿಶ್ವದಾದ್ಯಂತ ಭಾರತೀಯರು ಮತ್ತು ಶಿವಾಜಿ ಮಹಾರಾಜರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಪ್ರತಿಮೆಯನ್ನು Haifa ಅಥವಾ ಇಸ್ರೇಲ್‌ನ ಮತ್ತೊಂದು ಪ್ರಮುಖ ನಗರದಲ್ಲಿ ಸ್ಥಾಪಿಸುವ ಕುರಿತು ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗುತ್ತಿತ್ತು, ನಿರ್ಧಿಷ್ಟವಾಗಿ ಎಲ್ಲಿ ಎಂದು ಇನ್ನೂ ಅಂತಿಮಗೊಂಡಿಲ್ಲ.

ಈ ಕುರಿತು ಯಾನಿವ್ ರೇವಚ್ ಮಾತನಾಡಿ, 'ಭಾರತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಇರುವ ಮಹತ್ವದ ಅರಿವು ನಮಗಿದೆ. ಅವರ ಭವ್ಯ ಪ್ರತಿಮೆಯನ್ನು ಇಸ್ರೇಲ್‌ನ ಪ್ರಮುಖ ನಗರವೊಂದರಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ. ಈ ಯೋಜನೆಯ ಮೂಲಕ ಭಾರತೀಯರು ಮತ್ತು ಇಸ್ರೇಲಿಗರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಭಾರತದ ಎಲ್ಲೆಡೆ ಪ್ರವಾಸ ಮಾಡಿದಾಗ, ಇಸ್ರೇಲ್ ಹಾಗೂ ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಜನರಲ್ಲಿ ಅಪಾರ ಗೌರವ ಇರುವುದು ಕಾಣಿಸುತ್ತಿದೆ. ಅದೇ ರೀತಿಯಲ್ಲಿ ಇಸ್ರೇಲ್ ಜನರೂ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಸ್ನೇಹದ ಮನೋಭಾವದಿಂದಲೇ ಇಸ್ರೇಲ್‌ನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ,' ಎಂದು ರೇವಚ್ ಹೇಳಿದ್ದಾರೆ.

ಇಸ್ರೇಲ್ ಈಗಾಗಲೇ ಈ ಸಂಬಂಧ ಭಾರತಕ್ಕೆ ಪತ್ರ ಬರೆದಿದ್ದು, ಅದರಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಭಾರತ-ಇಸ್ರೇಲ್ ನಡುವಿನ ಆತ್ಮೀಯ ಸಂಬಂಧದ ಸಂಕೇತವಾಗಲಿದೆ ಎಂದು ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರ ಮತ್ತು ಯಹೂದಿ ಸಮುದಾಯದ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಗಮನಿಸಿದರೆ, ಈ ಸ್ಮಾರಕಕ್ಕೆ ವಿಶೇಷ ಮಹತ್ವವಿದೆ.

ಈ ಐತಿಹಾಸಿಕ ಘೋಷಣೆಗೆ ಪ್ರತಿಕ್ರಿಯಿಸಿರುವ ದೇವೇಂದ್ರ ಫಡ್ನಾವೀಸ್, 'ಶಿವರಾಜ್ಯಾಭಿಷೇಕದ ದಿನದಂದು ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆ ಸ್ಥಾಪಿಸುವ ಐತಿಹಾಸಿಕ ಘೋಷಣೆ ಅತ್ಯಂತ ಸಂತಸದ ವಿಷಯ. ಈ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ,' ಎಂದು ತಿಳಿಸಿದ್ದಾರೆ.

ಭಾರತೀಯ ಯೋಧರಲ್ಲಿ ಶಿವಾಜಿಗೆ ಅಗ್ರ ಸ್ಥಾನ:

ಭಾರತದ ಇತಿಹಾಸದಲ್ಲಿನ ಶ್ರೇಷ್ಠ ರಾಜ ಹಾಗೂ ಯೋಧರಲ್ಲಿ ಛತ್ರಪತಿ ಶಿವರಾಜ್ ಪ್ರಮುಖರು. ಮಹಾರಾಷ್ಟ್ರದ ಶಿವನೇರಿ ಕೋಟೆಯಲ್ಲಿ 1630ರಲ್ಲಿ ಜನಿಸಿದ ಅವರು ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ಮೊಘಲ್ ಮತ್ತು ಇತರೆ ಸುಲ್ತಾನರ ಆಡಳಿತ ಪ್ರಬಲವಾಗಿದ್ದಾಗ, ಶಿವಾಜಿ ಸ್ವರಾಜ್ಯದ ಪರಿಕಲ್ಪನೆಯನ್ನು ಮುಂದಿಟ್ಟು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.

ಚಾಣಾಕ್ಷ ಯುದ್ಧತಂತ್ರ, ವಿಶೇಷವಾಗಿ 'ಗೆರಿಲ್ಲಾ ಯುದ್ಧ'ದಿಂದ ಶಿವಾಜಿ ಜನಪ್ರಿಯರಾಗಿದ್ದರು. ಅನೇಕ ಕೋಟೆ ಕೊತ್ತಲೆಗಳನ್ನು ನಿರ್ಮಿಸಿ, ಬಲಿಷ್ಠ ನೌಕಾಪಡೆಯನ್ನೂ ಕಟ್ಟಿದರು. ರೈತರ, ಮಹಿಳೆಯರ ಹಾಗೂ ಸಾಮಾನ್ಯ ಜನರ ಹಿತಾಸಕ್ತಿಯನ್ನು ಕಾಪಾಡಿದ ನ್ಯಾಯಪ್ರಿಯ ಆಡಳಿತಗಾರರಾಗಿದ್ದರು.

1674ರಲ್ಲಿ ರಾಯಗಢದಲ್ಲಿ ಛತ್ರಪತಿಯಾಗಿ ಪಟ್ಟಾಭಿಷೇಕಗೊಂಡ ಅವರು ಮರಾಠಾ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿದರು. ಧರ್ಮ, ಜಾತಿ ಭೇದವಿಲ್ಲದೆ ಎಲ್ಲರನ್ನೂ ಗೌರವಿಸುವ ಆಡಳಿತವನ್ನು ನಡೆಸಿದರು. ಅವರ ಧೈರ್ಯ, ದೇಶಭಕ್ತಿ ಮತ್ತು ಉತ್ತಮ ಆಡಳಿತದ ಕಾರಣದಿಂದ ಇಂದಿಗೂ ಶಿವಾಜಿ ಮಹಾರಾಜರನ್ನು ಭಾರತದಲ್ಲಿ ಆದರ್ಶ ರಾಜನಾಗಿ ಸ್ಮರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+