ಚಾಣಾಕ್ಯನ ಈ 9 ನೀತಿಗಳು ತಿಳಿದಿದ್ದಾಗ ಮಾತ್ರ ಮಗು ಜೀವನದ ಯಶಸ್ಸಿನ ಮೆಟ್ಟಿಲು ಹತ್ತಬಹುದು
ಯಶಸ್ಸು ಅನ್ನುವುದನ್ನು ನಮಗೆ ಸಿಗುವ ಗೌರವ, ಹಣ ಅಥವಾ ಸಾಧನೆಗಳ ಮೂಲಕ ಅಳೆಯಲಾಗುತ್ತದೆ. ಆದರೆ ಆಚಾರ್ಯ ಚಾಣಾಕ್ಯರು ಇದನ್ನು ವ್ಯಾಖ್ಯಾನಿಸುವುದೇ ಬೇರೆ ರೀತಿಯಲ್ಲಿ. ನಿಜವಾದ ಯಶಸ್ಸು ವ್ಯಕ್ತಿಯು ಬಾಲ್ಯದಲ್ಲಿ ಅನುಸರಿಸುವ ಅಭ್ಯಾಸಗಳು, ಆಯ್ಕೆಗಳು ಮತ್ತು ಮೌಲ್ಯಗಳಿಂದ ಪ್ರಾರಂಭವಾಗುತ್ತದೆ ಎನುವುದು ಅವರ ವಾದ. ಚಾಣಕ್ಯನ ನೀತಿಯಲ್ಲಿ ಹೇಳಲಾದ ಒಂದೊಂದು ಪಾಠಗಳು ನಾಯಕತ್ವ, ಶಿಸ್ತು ಮತ್ತು ಬುದ್ಧಿವಂತಿಕೆಯ ಮೇಲೆ ಕೇಂದ್ರೀಕೃತವಾಗಿವೆ. ಚಾಣಕ್ಯ ನೀತಿಯಿಂದ ಪ್ರತಿ ಮಗುವೂ ಕಲಿಯಬೇಕಾದ ಒಂಭತ್ತು ಪ್ರಬಲ ಪಾಠಗಳು ಇಲ್ಲಿವೆ:
ಸ್ನೇಹಿತರ ಆಯ್ಕೆಯಲ್ಲಿ ಎಚ್ಚರ ಮತ್ತು ಬುದ್ಧಿವಂತಿಕೆ ಇರಲಿ:
ಇದು ಮಕ್ಕಳಿಗೆ ಅತ್ಯಂತ ಮುಖ್ಯವಾದ ಬೋಧನೆಗಳಲ್ಲಿ ಒಂದಾಗಿದೆ. ಸಹವಾಸ ಎನ್ನುವುದು ಜೀವನದಲ್ಲಿ ಬಹಳ ಮುಖ್ಯ. ನಾವು ಯಾರ ಜೊತೆ ಸಮಯ ಕಳೆಯುತ್ತೇವೆ ಅವರು ನಮ್ಮ ಅಭ್ಯಾಸ, ಆಲೋಚನೆಗಳು ಮತ್ತು ಭವಿಷ್ಯವನ್ನು ರೂಪಿಸುತ್ತಾರೆ. ಮಕ್ಕಳು ಮತ್ತು ಹದಿಹರೆಯದವರ ಪಾಲಿಗೆ ಸ್ನೇಹವು ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ನೇಹವು ಪ್ರಾಮಾಣಿಕತೆ ಮತ್ತು ದಯೆಯೊಂದಿಗೆ ಕಲಿಕೆ ಮತ್ತು ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆಯೇ ಎಂಬುದನ್ನು ಗಮನಿಸಲು ಮಕ್ಕಳು ಕಲಿಯಬೇಕು.

ವ್ಯಕ್ತಿತ್ವಕ್ಕಿಂತ ಖ್ಯಾತಿ ದೊಡ್ಡದಲ್ಲ:
ಚಾಣಕ್ಯನ ಅತ್ಯಂತ ಪ್ರಬಲ ಸಂದೇಶವೆಂದರೆ, ವ್ಯಕ್ತಿಯ ನಿಜವಾದ ಮೌಲ್ಯವು ಅವರ ನಡವಳಿಕೆಯಿಂದ ಬರುತ್ತದೆ. ನಿಮ್ಮ ಬಗ್ಗೆ ಯಾರು ಏನು ಯೋಚಿಸುತ್ತಾರೆ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾರೂ ಇಲ್ಲದಿರುವಾಗ ನೀವು ಹೇಗಿರುತ್ತೀರೋ ಎಲ್ಲರ ಮುಂದೆಯೂ ಹಾಗೆಯೇ ಇರಬೇಕು. ಸುತ್ತಮುತ್ತಲಿನವರ ಬಾಯಿಯಿಂದ ಒಳ್ಳೆಯ ಮಾತುಗಳನ್ನು ಕೇಳಿಸುವ ಸಲುವಾಗಿ ಅಥವಾ ಬೇರೆಯವರನ್ನು ಮೆಚ್ಚಿಸಲು ಬೇಕಾಗಿ ಒತ್ತಡವನ್ನು ಅನುಭವಿಸುವ ಅಗತ್ಯವಿಲ್ಲ. ಕಷ್ಟದ ಸಂದರ್ಭಗಳಲ್ಲಿಯೂ ಪ್ರಾಮಾಣಿಕರಾಗಿ ಉಳಿದು, ತಪ್ಪುಗಳನ್ನು ಒಪ್ಪಿಕೊಂಡು ಭವಿಷ್ಯದಲ್ಲಿ ಸುಧಾರಿಸಿದಾಗ ಮತ್ತು ಪ್ರತಿಫಲಗಳನ್ನು ಬಯಸದೆ ಸರಿಯಾದ ಕೆಲಸವನ್ನು ಮಾಡಿದಾಗ ಒಳ್ಳೆಯ ವ್ಯಕ್ತಿತ್ವವು ರೂಪುಗೊಳ್ಳುತ್ತದೆ.
ಎಲ್ಲಾ ರಹಸ್ಯವನ್ನು ಹಂಚಿಕೊಳ್ಳಬೇಕಾಗಿಲ್ಲ:
ಸಾಮಾಜಿಕ ಮಾಧ್ಯಮಗಳಿಂದ ಸುತ್ತುವರಿದ ಜಗತ್ತಿನಲ್ಲಿ, ವೈಯಕ್ತಿಕ ಮಾಹಿತಿಯನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಚಾಣಾಕ್ಯ ಬಹಳ ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ. ಎಲ್ಲವನ್ನೂ ಎಲ್ಲರಿಗೂ ಬಹಿರಂಗಪಡಿಸುವ ಅಗತ್ಯವಿಲ್ಲ. ವೈಯಕ್ತಿಕ ಭಾವನೆಗಳು ಅಥವಾ ಕೌಟುಂಬಿಕ ವಿಷಯಗಳನ್ನು ವಿಶ್ವಾಸಾರ್ಹರ ಬಳಿ ಮಾತ್ರ ಬಹಿರಂಗಪಡಿಸಬೇಕು. ಎಲ್ಲರಿಗೂ ಎಲ್ಲವನ್ನೂ ತಿಳಿಸುವ ಅಗತ್ಯ ಇರುವುದಿಲ್ಲ. ಯಾರು ತಮ್ಮ ನಂಬಿಕೆಗೆ ಅರ್ಹರು ಮತ್ತು ಯಾರು ಅನರ್ಹರು ಎನ್ನುವುದನ್ನು ಗುರುತಿಸಿಕೊಳ್ಳಬೇಕು.
ಮಾತನಾಡುವ ಮೊದಲು ಯೋಚಿಸಿ:
ಚಾಣಕ್ಯನ ಬೋಧನೆಯು ಪದಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾವಾಡುವ ಪದಗಳು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಮಕ್ಕಳು ಹೆಚ್ಚಾಗಿ ಭಾವನಾತ್ಮಕವಾಗಿ ಮಾತನಾಡಿ ಬಿಡುತ್ತಾರೆ. ಆದರೆ, ಚಾಣಕ್ಯನ ಬೋಧನೆಯು ಸ್ವಯಂ ನಿಯಂತ್ರಣವನ್ನು ಬೆಳೆಸಿಕೊಳ್ಳಲು ಮಾತನಾಡುವ ಮೊದಲು ಯೋಚಿಸಿ ಶಬ್ದಗಳನ್ನು ಬಳಸಬೇಕು ಎನ್ನುವುದನ್ನು ಕಲಿಸುತ್ತದೆ. ಆತ್ಮವಿಶ್ವಾಸದಿಂದ ಮಾತನಾಡುವುದರ ಜೊತೆಗೆ, ಮಕ್ಕಳು ಜವಾಬ್ದಾರಿಯುತವಾಗಿ ಮಾತನಾಡಲು ಕಲಿಯಬೇಕು.
ಕಠಿಣ ಪರಿಶ್ರಮ ಮತ್ತು ಶಿಸ್ತಿಗೆ ಭಯಪಡಬಾರದು:
ತ್ವರಿತ ಯಶಸ್ಸಿನಿಂದ ತುಂಬಿರುವ ಜಗತ್ತಿನಲ್ಲಿ, ಚಾಣಕ್ಯನ ಬೋಧನೆಗಳಲ್ಲಿ ಕಂಡುಬರುವ ಅತ್ಯಂತ ಬಲವಾದ ಸಂದೇಶವೆಂದರೆ ಯಶಸ್ಸು ಎನ್ನುವುದು ಸಮರ್ಪಣೆ, ಶಿಸ್ತು ಮತ್ತು ಸ್ಥಿರ ಪ್ರಯತ್ನದಿಂದ ಬರುತ್ತದೆ. ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಕಠಿಣ ಪರಿಶ್ರಮವನ್ನು ಗೌರವಿಸಲು ಕಲಿಯುವ ಮಗುವಿಗೆ ಯಶಸ್ಸಿನ ಬಾಗಿಲು ತೆರೆದುಕೊಳ್ಳುವುದು. ಆ ಯಶಸ್ಸನ್ನು ಉಳಿಸಿಕೊಳ್ಳಬೇಕಾದರೆ ಶಿಸ್ತು ಕೂಡಾ ಬಹಲ ಮುಖ್ಯವಾಗಿರುತ್ತದೆ.
ಜ್ಞಾನವೇ ನಿಮ್ಮ ದೊಡ್ಡ ಶಕ್ತಿ:
ಶಿಕ್ಷಣ ಮತ್ತು ಬುದ್ಧಿವಂತಿಕೆಗೆ ಅಪಾರ ಪ್ರಾಮುಖ್ಯತೆಯನ್ನು ನೀಡಿದ್ದವರು ಚಾಣಕ್ಯ. ಅವನ ನಂಬಿಕೆಗಳ ಪ್ರಕಾರ, ಜ್ಞಾನವು ವ್ಯಕ್ತಿಯ ಜೀವನವನ್ನು ಪರಿವರ್ತಿಸುವ ಶಕ್ತಿಶಾಲಿ ಸಾಧನವಾಗಿದೆ. ಪ್ರಸ್ತುತ ಈ ಕಲ್ಪನೆಯು ಇನ್ನೂ ಹೆಚ್ಚು ಮುಖ್ಯವಾಗಿದೆ. ಏಕೆಂದರೆ ಜಗತ್ತು ವೇಗವಾಗಿ ಬದಲಾಗುತ್ತಿದೆ. ಕುತೂಹಲದಿಂದ ಮತ್ತು ಕಲಿಕೆಗೆ ಮುಕ್ತವಾಗಿರುವ ಮಕ್ಕಳು ಹೊಸ ಸವಾಲುಗಳನ್ನು ನಿಭಾಯಿಸಲು ಉತ್ತಮವಾಗಿ ಸಿದ್ಧರಾಗಿರುತ್ತಾರೆ. ಹಾಗಾಗಿ ಮಕ್ಕಳು ತಮಗೆ ಎಲ್ಲವೂ ತಿಳಿದಿದೆ ಎಂದು ಎಂದಿಗೂ ಭಾವಿಸುವಂತಿಲ್ಲ. ಕಲಿಕೆ ಎನ್ನುವುದು ನಿರಂತರವಾಗಿರುತ್ತದೆ.
ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ:
ವ್ಯರ್ಥವಾದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸುವುದು ಅಗತ್ಯವೂ ಹೌದು, ಅನಿವಾರ್ಯವೂ ಹೌದು. ಮಕ್ಕಳು ಟೈಂ ಮ್ಯಾನೆಝ್‌ಮೆಂಟ್ ಎನ್ನುವುದನ್ನು ಕಲಿಯುವುದು ಮುಖ್ಯ. ಏಕೆಂದರೆ ಅದು ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಬಹಳ ಸಹಾಯ ಮಾಡುತ್ತದೆ. ಸಮಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಕಲಿಯುವ ಮಗು ಶಿಸ್ತನ್ನು ಬೆಳೆಸಿಕೊಳ್ಳುತ್ತದೆ.
ಭಾವನೆಗಳನ್ನು ನಿಯಂತ್ರಿಸಲು ಕಲಿಯಿರಿ:
ಚಾಣಕ್ಯನ ಪ್ರಮುಖ ಬೋಧನೆಗಳಲ್ಲಿ ಒಂದು ಸ್ವಯಂ ನಿಯಂತ್ರಣ. ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿಯು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ಶಾಂತವಾಗಿ ಪ್ರತಿಕ್ರಿಯಿಸುವುದು ಮಕ್ಕಳ ಭಾವನಾತ್ಮಕ ಶಕ್ತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಮಕ್ಕಳು ತಮ್ಮ ಭಾವನೆಗಳನ್ನು ಬುಚ್ಚಿಡಲು,ಅವರ ಮನಸ್ಸಿನ ತೊಳಲಾಟದ ಬಗ್ಗೆ ಮಾತನಾಡಲು ಮತ್ತು ಕಷ್ಟಕರ ಕ್ಷಣಗಳನ್ನು ಹೇಗೆ ನಿಭಾಯಿಸಬಹುದು ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸಿ ಹೇಳಬೇಕು.
ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ಅವುಗಳಿಂದಲೇ ಪಾಠ ಕಲಿಯಿರಿ:
ಚಾಣಕ್ಯನ ಬೋಧನೆಗಳು ಅನುಭವದ ಮೂಲಕ ಪಡೆದ ಬುದ್ಧಿವಂತಿಕೆಯ ಮೇಲೆ ಕೇಂದ್ರೀಕೃತವಾಗಿವೆ. ತಪ್ಪುಗಳನ್ನು ಗಮನಿಸಿ ಅವುಗಳನ್ನು ಸರಿಪಡಿಸುವ ಮೂಲಕ ವ್ಯಕ್ತಿಯು ಬಲಶಾಲಿಯಾಗುತ್ತಾನೆ. ಮಕ್ಕಳಿಗೆ, ಇದು ಪ್ರಬಲ ಪಾಠವನ್ನು ನೀಡುತ್ತದೆ. ಏಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಮಕ್ಕಳು ವೈಫಲ್ಯವನ್ನು ಅಂತ್ಯ ಎಂದೇ ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ಅವರು ಮಾಡುವ ಪ್ರತಿಯೊಂದು ತಪ್ಪು, ಅವರು ಎದುರಿಸುವ ಪ್ರತಿಯೊಂದು ವೈಫಲ್ಯವನ್ನು ಸುಧಾರಿಸಲು ಬದಲಾವಣೆಯನ್ನು ಕಂಡುಕೊಳ್ಳುವ ಅಗತ್ಯವಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications