Bharathiraja: ಚಿತ್ರರಂಗದಲ್ಲಿ ಮತ್ತೊಂದು ಯುಗಾಂತ್ಯ; ಪುಟ್ಟಣ್ಣ ಕಣಗಾಲ್ ಶಿಷ್ಯ, ಖ್ಯಾತ ನಿರ್ದೇಶಕ ಭಾರತಿರಾಜ ಇನ್ನಿಲ್ಲ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ಭಾರತಿರಾಜ (Bharathiraja) ಅವರು ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಡಿಸೆಂಬರ್‌ನಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಈ ವರ್ಷದ ಆರಂಭದಲ್ಲೂ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗಿನ ಜಾವ ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (TFPC) ಖಚಿತಪಡಿಸಿದೆ.

ಕನ್ನಡದ ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಕಲಿತಿದ್ದ ಕಲೆ

ಕನ್ನಡಿಗರಿಗೆ ಹೆಮ್ಮೆಯ ವಿಷಯವೆಂದರೆ, ಭಾರತೀಯ ಚಿತ್ರರಂಗವನ್ನೇ ಆಳಿದ ಭಾರತಿರಾಜ ಅವರು ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ್ದು ಕನ್ನಡದ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಹಾಯಕ ನಿರ್ದೇಶಕರಾಗಿ. ಪುಟ್ಟಣ್ಣ ಅವರ ಮೇಕಿಂಗ್ ಶೈಲಿ, ಕಥೆ ಹೇಳುವ ಚಾತುರ್ಯವನ್ನು ಹತ್ತಿರದಿಂದ ಕಲಿತಿದ್ದ ಭಾರತಿರಾಜ, ಮುಂದೆ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಹೊಸ ಇತಿಹಾಸ ಬರೆದರು.

Bharathiraja

ಹಳ್ಳಿಯ ಮಣ್ಣಿಗೆ ಸಿನಿಮಾ ಕರೆದೊಯ್ದ ನಾಯಕ

70ರ ದಶಕದಲ್ಲಿ ತಮಿಳು ಚಿತ್ರರಂಗ ಕೇವಲ ನಾಲ್ಕು ಗೋಡೆಗಳ ಮಧ್ಯೆ, ಅದ್ದೂರಿ ಸೆಟ್‌ಗಳಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಅಂತಹ ಕಾಲದಲ್ಲಿ ಸಿನಿಮಾವನ್ನು ಸ್ಟುಡಿಯೋಗಳಿಂದ ಹೊರತಂದು, ಹಳ್ಳಿಗಳ ನೈಜ ಪರಿಸರ, ಗ್ರಾಮೀಣ ಜೀವನ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬೆಳ್ಳಿತೆರೆಯ ಮೇಲೆ ತಂದ ಮೊದಲ ಹೆಗ್ಗಳಿಕೆ ಇವರದ್ದು. 1977ರಲ್ಲಿ ಬಿಡುಗಡೆಯಾದ ಇವರ ಚೊಚ್ಚಲ ನಿರ್ದೇಶನದ '16 ವಯದಿನಿಲೆ' ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಇತಿಹಾಸ ಸೃಷ್ಟಿಸಿತು. ಕಮಲ್ ಹಾಸನ್, ರಜನಿಕಾಂತ್ ಮತ್ತು ಶ್ರೀದೇವಿ ನಟಿಸಿದ್ದ ಈ ಸಿನಿಮಾ ತಮಿಳು ಸಿನಿಮಾದ ದಿಕ್ಕನ್ನೇ ಬದಲಾಯಿಸಿತು.

ದಶಕಗಳ ಕಾಲ ಆಳಿದ ದೃಶ್ಯ ವೈಭವ

ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತಿರಾಜ ಅವರು ರಜನಿಕಾಂತ್, ಕಮಲ್ ಹಾಸನ್, ಶಿವಾಜಿ ಗಣೇಶನ್ ಅವರಂತಹ ಸೂಪರ್ ಸ್ಟಾರ್‌ಗಳಿಗೆ ಸೂಪರ್ ಇಟ್ ಚಿತ್ರಗಳನ್ನು ನೀಡಿದ್ದಾರೆ. 'ಕಿಳಕ್ಕೆ ಪೋಗುಂ ರೈಲ್', 'ಸಿಗಪ್ಪು ರೋಜಾಕ್ಕಳ್', 'ಅಲೈಗಳ್ ಓಯ್ವದಿಲ್ಲೈ', 'ಟಿಕ್ ಟಿಕ್ ಟಿಕ್', 'ಮುತ್ತಲ್ ಮರಿಯಾದೈ' ಇವರ ಕರಿಯರ್‌ನ ಮೈಲಿಗಲ್ಲು ಚಿತ್ರಗಳು. ಇವರ ಕೊನೆಯ ನಿರ್ದೇಶನ 2023ರ ಅಮೆಜಾನ್ ಪ್ರೈಮ್‌ನ 'ಮಾಡರ್ನ್ ಲವ್ ಚೆನ್ನೈ' ಮೂಡಿಬಂದಿತ್ತು.

ನಟನಾಗಿಯೂ ಸೈ ಎನಿಸಿಕೊಂಡಿದ್ದರು

ಕೇವಲ ನಿರ್ದೇಶನ ಮಾತ್ರವಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ನಟನಾಗಿಯೂ ಪ್ರೇಕ್ಷಕರ ಮನ ಗೆದ್ದಿದ್ದರು. 'ಆಯುಧ ಎಳುತ್ತು', 'ಪಾಂಡಿಯನಾಡು', 'ಈಶ್ವರನ್', 'ತಿರುಚಿತ್ರಂಬಲಂ' ಹಾಗೂ ಇತ್ತೀಚಿನ ಸೂಪರ್ ಹಿಟ್ ಸಿನಿಮಾ 'ಮಹಾರಾಜ' ಚಿತ್ರದಲ್ಲಿ ಇವರ ನಟನೆ ಜನಮನ ಗೆದ್ದಿತ್ತು. ಇನ್ನು 2025ರಲ್ಲಿ ಬಿಡುಗಡೆಯಾಗಿದ್ದ ಮೋಹನ್ ಲಾಲ್ ಹಾಗೂ ಶೋಭನಾ ನಟನೆಯ 'ತುಡರುಂ' ಚಿತ್ರ ಇವರ ಕೊನೆಯ ತೆರೆಬರಹವಾಗಿದೆ.

Bharathiraja

ಗಣ್ಯರ ಕಂಬನಿ ಮತ್ತು ವೈಯಕ್ತಿಕ ಜೀವನ

ಭಾರತಿರಾಜ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ. ತಮಿಳುನಾಡು ಸಿಎಂ ವಿಜಯ್‌, ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ಭಾವುಕರಾಗಿ ಟ್ವೀಟ್ ಮಾಡಿದ್ದು, "ನನ್ನ ನೆಚ್ಚಿನ ನಿರ್ದೇಶಕ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಅವರ ಸಿನೆಮಾಗಳೇ ನಮಗೆ ಫಿಲ್ಮ್ ಮೇಕಿಂಗ್ ಇನ್ಸ್ಟಿಟ್ಯೂಷನ್ ಇದ್ದಂತೆ. ನನ್ನನ್ನು ಎರಡು ಜುಟ್ಟು ಹಾಕಿ ಸಿನಿಮಾ ಮಾಡ್ತೀನಿ ಅಂತ ಪದೇ ಪದೇ ಹೇಳ್ತಿದ್ರು, ಆ ಕನಸು ನನಸಾಗಿಯೇ ಉಳಿಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತಿರಾಜ ಅವರು ಪತ್ನಿ ಚಂದ್ರಲೀಲಾ ಹಾಗೂ ಮಗಳು ಜನನಿಯನ್ನು ಅಗಲಿದ್ದಾರೆ. ಇವರ ಪುತ್ರ ಮನೋಜ್ ಭಾರತಿರಾಜ ಅವರು ಕಳೆದ 2025ರಲ್ಲಿಯೇ ನಿಧನರಾಗಿದ್ದರು. ಭಾರತೀಯ ಚಿತ್ರರಂಗದ ದಂತಕಥೆ, ಹಿರಿಯ ತಮಿಳು ನಿರ್ದೇಶಕ ಮತ್ತು ನಟ ಭಾರತಿರಾಜ ಅವರ ನಿಧನದ ಸುದ್ದಿ ಇಡೀ ಸಿನೆಮಾ ಲೋಕಕ್ಕೆ ಬಿಗ್ ಶಾಕ್ ನೀಡಿದೆ.

ಇಳಿಯರಾಜ-ಭಾರತಿರಾಜ ದೋಸ್ತಿಗಳ ಬದುಕಲ್ಲಿ ನಡೆದಿತ್ತು ಒಂದೇ ರೀತಿಯ ದುರಂತ

ತಮಿಳು ಚಿತ್ರರಂಗದ ಇಬ್ಬರು ದಂತಕಥೆಗಳಾದ ಇಳಯರಾಜ ಹಾಗೂ ಭಾರತಿರಾಜ ಅವರ ಸ್ನೇಹ ಮನೆಮಾತಾಗಿತ್ತು. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲೂ ಅವರಿಬ್ಬರು ಕುಚಿಕು ಗೆಳೆಯರಾಗಿದ್ದರು. ಈಗ ಭಾರತಿರಾಜ ಅವರ ನಿಧನದಿಂದಾಗಿ ಇಳಯರಾಜ ಅವರು ತಮ್ಮ ಜೀವನದ ಅತ್ಯಂತ ಆಪ್ತ ಸ್ನೇಹಿತನನ್ನು ಕಳೆದುಕೊಂಡು ತೀವ್ರ ದುಃಖದಲ್ಲಿ ಮುಳುಗಿದ್ದಾರೆ.

Bharathiraja

ತೇನಿ ಜಿಲ್ಲೆಯ 'ಪಣ್ಣೈಪುರಂ' ಎಂಬ ಪುಟ್ಟ ಹಳ್ಳಿಯಿಂದ ಸಿನಿಮಾ ಲೋಕದ ದೊಡ್ಡ ಕನಸು ಹೊತ್ತು ಒಟ್ಟಿಗೆ ಮದ್ರಾಸ್‌ಗೆ (ಚೆನ್ನೈ) ಬಂದವರು ಇಳಯರಾಜ ಮತ್ತು ಭಾರತಿರಾಜ. ಆರಂಭದ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಕಷ್ಟಪಟ್ಟರು, ಹಸಿವು-ನೋವನ್ನು ಹಂಚಿಕೊಂಡರು. ಮುಂದೆ ಒಬ್ಬರು ಭಾರತೀಯ ಸಂಗೀತ ಹಾಗೂ ತಮಿಳು ಚಿತ್ರರಂಗದ ದಿಕ್ಕನ್ನೇ ಬದಲಿಸಿದರು. ಸ್ಟಾರ್‌ಗಳಾದ ಮೇಲೂ ಅವರ ಹಳ್ಳಿಯ ಸ್ನೇಹ ಮಾತ್ರ ಕೊನೆಯವರೆಗೂ ಬದಲಾಗಲಿಲ್ಲ.

ದುರದೃಷ್ಟವಶಾತ್, ಯಶಸ್ಸಿನ ಉತ್ತುಂಗದಲ್ಲಿದ್ದ ಈ ಇಬ್ಬರು ಜೀವದ ಗೆಳೆಯರ ವೈಯಕ್ತಿಕ ಜೀವನದಲ್ಲಿ ವಿಧಿ ಒಂದೇ ರೀತಿಯ ಕ್ರೂರ ಆಟವಾಡಿತ್ತು. ಕೆಲವು ವರ್ಷಗಳ ಹಿಂದೆ ಇಳಿಯರಾಜ ಅವರು ತಮ್ಮ ಪ್ರೀತಿಯ ಮಗಳು, ಗಾಯಕಿ ಭವತಾರಿಣಿಯನ್ನು ಕಳೆದುಕೊಂಡಿದ್ದರು. ಮಗಳ ಸಾವಿನಿಂದ ಇಳಯರಾಜ ಸಂಪೂರ್ಣವಾಗಿ ಕುಂದಿದ್ದರು. ಆ ಸಮಯದಲ್ಲಿ ಗೆಳೆಯ ಭಾರತಿರಾಜ ಇಳಯರಾಜ ಅವರಿಗೆ ಬೆಂಬಲವಾಗಿ ನಿಂತು ಸಾಂತ್ವನ ಹೇಳಿದ್ದರು. ವಿಧಿಯ ಆಟ ನೋಡಿ, ಮಗಳನ್ನ ಕಳೆದುಕೊಂಡ ಇಳಯರಾಜ ಅವರ ನೋವು ಮಾಸುವ ಮುನ್ನವೇ, ಭಾರತಿರಾಜ ಅವರ ಮಗ ಮನೋಜ್ ಭಾರತಿರಾಜ ಕೂಡ ನಿಧನರಾದರು. ಮಗನ ಸಾವಿನಿಂದ ಭಾರತಿರಾಜ ಅವರು ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ಆಗ ಇಳಯರಾಜ ಅವರು ಭಾರತಿರಾಜ ಅವರ ಮನೆಗೆ ಧಾವಿಸಿ ಗೆಳೆಯನಿಗೆ ಧೈರ್ಯ ತುಂಬಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+