ಪೆಟ್ರೋಲ್-ಡೀಸೆಲ್ ರೇಟ್ ಕಡಿಮೆಯಾದ್ರೆ ಸಾಕಪ್ಪ ಅಂತಿದ್ದ ಜನಸಾಮಾನ್ಯರಿಗೆ ಕೇಂದ್ರದಿಂದ ಸಿಕ್ತು ಬಿಗ್ ಗುಡ್‌ನ್ಯೂಸ್
ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿಯ ಹಿನ್ನೆಲೆ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಎಲ್‌ಪಿಜಿ ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಪೆಟ್ರೋಲ್-ಡೀಸೆಲ್ ದರಗಳು ಹೆಚ್ಚಾಗಿ ವಾಹನ ಚಲಾಯಿಸಲು ಜನ ಯೋಚಿಸುತ್ತಿದ್ದಾರೆ. ದರ ಕಡಿಮೆಯಾದ್ರೆ ಸಾಕಪ್ಪ, ಅದು ಯಾವಾಗ ಆಗುತ್ತೋ? ಎಂದು ತಲೆಕೆಡಿಸಿಕೊಂಡು ಕಾಯುತ್ತಿದ್ದ ದೇಶದ ಜನರಿಗೆ ಕೇಂದ್ರ ಸರ್ಕಾರ ಕೊನೆಗೂ ಒಂದು ನೆಮ್ಮದಿಯ ಸುದ್ದಿ ನೀಡಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ತೈಲ ಮತ್ತು ಅನಿಲದ (Oil and Gas) ಬೆಲೆಗಳು ಇಳಿಕೆಯಾಗಲಿವೆ ಎಂದು ಸುಳಿವು ಕೊಟ್ಟಿದ್ದಾರೆ. ದೇಶದಲ್ಲಿ ಸದ್ಯಕ್ಕೆ ಇಂಧನದ ಯಾವುದೇ ಕೊರತೆಯಿಲ್ಲ ಮತ್ತು ಮುಂಬರುವ ತಿಂಗಳುಗಳಲ್ಲಿ ಬೆಲೆಗಳು ಇಳಿಕೆಯಾಗುವ ಎಲ್ಲ ಲಕ್ಷಣಗಳಿವೆ ಎಂದು ಸಂದೇಶ ರವಾನಿಸಿದ್ದಾರೆ.

ಬೆಲೆ ಏರಿಕೆಗೆ ಕಾರಣವೇನು?
ಇತ್ತೀಚಿನ ದಿನಗಳಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ 40ರಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರೆಲ್‌ಗೆ ಸುಮಾರು 100 ಡಾಲರ್ ತಲುಪಿದೆ. ಜಗತ್ತಿನ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ 'ಸ್ಟ್ರೈಟ್ ಆಫ್ ಹಾರ್ಮುಜ್' ಮಾರ್ಗದಲ್ಲಿ ಹಡಗು ಸಂಚಾರಕ್ಕೆ ತೊಂದರೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇದರ ಪರಿಣಾಮವಾಗಿ ಭಾರತದಲ್ಲೂ ಮೇ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದುಬಾರಿಯಾಗಿದೆ.
ಚಿಂತೆ ಬೇಡ, ಭಾರತದ ಬಳಿ ಇದೆ 80 ದಿನಗಳ ಸ್ಟಾಕ್
ಆದರೆ, ಈ ಬೆಲೆ ಏರಿಕೆ ತಾತ್ಕಾಲಿಕ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. "ಕಚ್ಚಾ ತೈಲದ ಬೆಲೆಗಳು ದೀರ್ಘಕಾಲದವರೆಗೆ ಇಷ್ಟೊಂದು ಗರಿಷ್ಠ ಮಟ್ಟದಲ್ಲಿ ಇರಲು ಸಾಧ್ಯವೇ ಇಲ್ಲ, ಶೀಘ್ರದಲ್ಲೇ ಇವು ಕುಸಿಯಲಿವೆ" ಎಂದಿದ್ದಾರೆ. ಅಷ್ಟೇ ಅಲ್ಲದೆ, ಯುದ್ಧದ ಸಂದಿಗ್ಧ ಪರಿಸರದಲ್ಲೂ ಭಾರತ ಸುರಕ್ಷಿತವಾಗಿದೆ. ದೇಶದ ಬಳಿ ಸದ್ಯಕ್ಕೆ ಬರೋಬ್ಬರಿ 76ರಿಂದ 80 ದಿನಗಳಿಗೆ ಆಗುವಷ್ಟು ತೈಲ ಮತ್ತು ಗ್ಯಾಸ್ ತುರ್ತು ಮೀಸಲು ದಾಸ್ತಾನು ಇದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಪರ್ಯಾಯ ಮಾರ್ಗಗಳ ಹುಡುಕಾಟ
ಯುದ್ಧಕ್ಕೂ ಮುನ್ನ ಭಾರತವು ತನ್ನ ಶೇ 40ಕ್ಕೂ ಹೆಚ್ಚು ಕಚ್ಚಾ ತೈಲವನ್ನು ಮತ್ತು ಶೇ 90ರಷ್ಟು ಎಲ್‌ಪಿಜಿ (LPG) ಗ್ಯಾಸ್ ಅನ್ನು ಇದೇ ಯುದ್ಧ ಪೀಡಿತ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಉಂಟಾಗಿರುವ ಕೊರತೆಯನ್ನು ನೀಗಿಸಲು ಅಮೆರಿಕ ಮತ್ತು ಕೆನಡಾ ಸೇರಿದಂತೆ ಪಶ್ಚಿಮ ದೇಶಗಳಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಮಾತುಕತೆ ನಡೆಸುತ್ತಿದ್ದು, ಪರಿಸ್ಥಿತಿ ಶೀಘ್ರದಲ್ಲೇ ಹತೋಟಿಗೆ ಬರಲಿದೆ ಎಂದು ಭರವಸೆ ನೀಡಿದ್ದಾರೆ. ಜಾಗತಿಕ ಶಾಂತಿಗೆ ಕರೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯವು, ಯುದ್ಧ ನಿಲ್ಲಿಸಲು ರಾಜತಾಂತ್ರಿಕ ಮಾತುಕತೆಗಳೇ ಏಕೈಕ ಪರಿಹಾರ ಎಂದು ಹೇಳಿದೆ. ಒಟ್ಟಾರೆಯಾಗಿ, ಇಂಧನ ಬೆಲೆ ಇಳಿಕೆಯಾಗುವ ಸಚಿವರ ಈ ಹೇಳಿಕೆ ಮಧ್ಯಮ ವರ್ಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಕರ್ನಾಟಕದಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರ
ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಇಂಧನ ದರಗಳು ಪ್ರಕಟವಾಗಿದ್ದು, ವಾಹನ ಸವಾರರು ಬಂಕ್‌ಗಳಿಗೆ ತೆರಳುವ ಮುನ್ನ ಇಂದಿನ ನಿಖರ ದರವನ್ನು ಗಮನಿಸುವುದು ಉತ್ತಮ. ಸಿಲಿಕಾನ್ ಸಿಟಿಯಲ್ಲಿ ಇಂದು (ಬುಧವಾರ) ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ ₹110.61ರಷ್ಟಿದೆ. ಇನ್ನು ಸಾರಿಗೆ ವಲಯಕ್ಕೆ ಪ್ರಮುಖವಾಗಿರುವ ಡೀಸೆಲ್ ದರವು ಪ್ರತಿ ಲೀಟರ್‌ಗೆ ₹98.54ರಂತೆ ವಹಿವಾಟು ನಡೆಸುತ್ತಿದೆ.













Click it and Unblock the Notifications