ಯುವತಿಯರ ಜೊತೆ ಚೆಲ್ಲಾಟ, ಉಡುಪಿಯ ಹೋಮ್ ಗಾರ್ಡ್ ಅಮಾನತು
ಉಡುಪಿ, ಮಾರ್ಚ್ 17: ಅಮಾಯಕ ಯುವತಿಯರನ್ನು ಪುಸಲಾಯಿಸಿ ಅವರೊಂದಿಗೆ ಸಂಬಂಧ ಬೆಳೆಸಿ ಸೆಲ್ಫಿ ತೆಗೆಯುವ ಚಾಳಿ ಹೊಂದಿದ್ದ ಕಾರ್ಕಳದ ಹೋಮ್ ಗಾರ್ಡ್ ಸುಜಿತ್ ಶೆಟ್ಟಿಯನ್ನು ಹೋಮ್ ಗಾರ್ಡ್ ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
11 ಕ್ಕೂ ಹೆಚ್ಚು ಯುವತಿಯರನ್ನು ಯಾಮಾರಿಸಿ ಅವರೊಂದಿಗೆ ತೆಗೆಸಿಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗೃಹರಕ್ಷಕದಳ ಸುಜಿತ್ ಶೆಟ್ಟಿಯನ್ನು ವಜಾಗೊಳಿಸಿದೆ.
ಈತ ಉಡುಪಿ ಜಿಲ್ಲೆಯ ಕಾರ್ಕಳದ ಮಂಜರಪಲ್ಕೆ ನಿವಾಸಿಯಾಗಿದ್ದು , 2016 ಆಗಸ್ಟ್ ನಲ್ಲಿ ಹೋಮ್ ಗಾರ್ಡ್ ವೃತ್ತಿಯನ್ನು ಆರಂಭಿಸಿದ್ದ. ಸುಜಿತ್ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದಾನೆ ಎಂದು ಹೇಳಲಾಗಿದ್ದು, ಹೋದಲೆಲ್ಲಾ ಪರಿಸರದ ಯುವತಿಯರನ್ನು ಯಾಮಾರಿಸಿ ತನ್ನ ಬಲೆಗೆ ಬೀಳಿಸುತ್ತಿದ್ದ.

ತಾನು ಪೊಲೀಸ್ ಎಂದು ಸುಳ್ಳು ಹೇಳಿ ಯುವತಿಯರೊಂದಿಗೆ ಸಂಬಂಧ ಬೆಳಸುತ್ತಿದ್ದ ಈತ ನಂತರ ಜನಸಂಚಾರ ವಿರಳ ವಿರುವ ಅಜ್ಞಾತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಚೆಲ್ಲಾಟ ವಾಡುತ್ತಿದ್ದ. ಅಷ್ಟೇ ಅಲ್ಲದೇ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.
ಈತ 11 ಕ್ಕೂ ಹೆಚ್ಚು ಯುವತಿಯರನ್ನು ಯಾಮಾರಿಸಿದ್ದ ಎಂದು ಆರೋಪಿಸಲಾಗಿದ್ದು , ಈತನ ಸೆಲ್ಪಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸುಜಿತ್ ಶೆಟ್ಟಿ ಈಗ ತಲೆಮರೆಸಿ ಕೊಂಡಿದ್ದಾನೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಉಡುಪಿ ಜಿಲ್ಲಾ ಗೃಹರಕ್ಷದಳದ ಕಮಾಂಡರ್ ಡಾ. ಪ್ರಶಾಂತ್ ಶೆಟ್ಟಿ ತಕ್ಷಣ ಹೋಮ್ ಗಾರ್ಡ್ ನಿಂದ ಸುಜಿತ್ ನನ್ನು ಸಸ್ಪೆಂಡ್ ಮಾಡುವ ನೋಟಿಸ್ ಜಾರಿ ಮಾಡಿದೆ. ಮಾತ್ರವಲ್ಲ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸುಜಿತ್ ಗೆ ಆದೇಶ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಪೊಲೀಸರು ಸುಜಿತ್ ಬಂಧನಕ್ಕೂ ಮುಂದಾಗಿದ್ದಾರೆ.












Click it and Unblock the Notifications