Holiday: ಭಾರೀ ಮಳೆ ಮುನ್ಸೂಚನೆ: ನಾಳೆ ರಾಜ್ಯದ ಈ ಜಿಲ್ಲೆಗಳ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
School Holiday: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಹಾಗೆಯೇ ಮಂಗಳವಾರ ಜೂನ್ 17ರಂದು ಕೂಡ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಉಡುಪಿ ಹಾಗೂ ಉತ್ತರ ಕನ್ನಡ ಕನ್ನಡ ಜಿಲ್ಲಾಡಳಿತಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿವೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಪರಿಣಾಮ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೆ ಸಂಭವಿಸಿ ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಹಲವೆಡೆ ವ್ಯಾಪಕವಾಗಿ ಮಳೆರಾಯನ ಆರ್ಭಟ ಮುಂದುವರೆದಿದೆ.

ಇನ್ನು ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ, ಈ ಜನರಿಗೆ ಕೆಲವೊಂದು ಸೂಚನೆಗಳನ್ನು ಸಹ ನೀಡಿದೆ. ಈ ನಡುವೆಯೇ ಮಕ್ಕಳ ಹಿತದೃಷ್ಟಿಯಿಂದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತಗಳು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಎಲ್ಲೆಲ್ಲಿ ರಜೆ ಘೋಷಣೆ?: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆ ಮುಂದುವರೆಯುವ ಎಚ್ಚರಿಕೆ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮಂಗಳವಾತ (ಜೂ 17) ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34 (ಎಂ) ಅಡಿಯಲ್ಲಿ ಜಿಲ್ಲಾಡಳಿತವು ಈ ಆದೇಶವನ್ನು ಹೊರಡಿಸಿದ್ದು, ಮಕ್ಕಳಿಗೆ ಯಾವುದೇ ಅನಾನುಕೂಲ ಆಗದಂತೆ ಮತ್ತು ಸಂಭವನೀಯ ಅವಘಡಗಳನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದೇಶದಲ್ಲಿ ತಿಳಿಸಿರುವಂತೆ ಈ ರಜೆಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರವಾರ ಹಾಗೂ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರವಾರ/ಶಿರಸಿ ಅವರು ಕಾರ್ಯರೂಪಕ್ಕೆ ತರಲಿದ್ದಾರೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಮಳೆ ಮುಮದುವರೆದರೆ ಪರಿಸ್ಥಿತಿ ನೋಡಿಕೊಂಡು ರಜಾ ದಿನವನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ, ಜಿಲ್ಲಾಡಳಿತವು ಸಾರ್ವಜನಿಕರಿಗೆ ಮಳೆಯ ಸಂದರ್ಭದಲ್ಲಿ ಸುರಕ್ಷಿತವಾಗಿರುವಂತೆ ಸೂಚನೆ ನೀಡಿದೆ. ಈಗಾಗಲೇ ಭಾರೀ ಮಳೆಯಿಂದ ಜಿಲ್ಲೆಯ ಹಲವೆಡೆ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದೆ.
ಜಿಲ್ಲಾಡಳಿತದಿಂದ ಜನರಿಗೆ ಪ್ರಮುಖ ಸೂಚನೆ: ರಣಮಳೆ ಮುಂದುವರೆದ ಪರಿಣಾಮ ಇಲ್ಲಿನ ಹಳ್ಳ-ಕೊಳ್ಳಗಳು, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ಅಕ್ಷರಸಃ ನಲುಗಿಹೋಗಿದ್ದಾರೆ. ಇನ್ನು ಇಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆಯೂ ಜಿಲ್ಲಾಡಳಿತವೂ ಸೂಚನೆ ನೀಡಿದೆ.
ಉಡುಪಿಯಲ್ಲೂ ರಜೆ ಘೋಷಣೆ: ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜೂನ್ 17ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ, ಪದವಿ ಪೂರ್ವ ಕಾಲೇಜು, ಐಟಿಐ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಇನ್ನು ದ್ವಿತೀಯ ಪಿ.ಯು.ಸಿ ಪರೀಕ್ಷೆ-3 ಎಂದಿನಂತೆ ನಡೆಯುತ್ತವೆ ಎಂದು ತಿಳಿಸಲಾಗಿದೆ.
ಭಾರೀ ಮಳೆ ಮುಂದುವರೆದ ಹಿನ್ನೆಲೆ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಚರ್ಚಿಸಿ ತುರ್ತು ಪರಿಸ್ಥಿತಿಗೆ ಸಿದ್ಧವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಜನರು ಯಾವುದೇ ಗೊಂದಲಕ್ಕೆ ಇಳಗಾಗದೆ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಮನವಿ ಮಾಡಿದೆ.












Click it and Unblock the Notifications