ಕಾರ್ಕಳದ ಈ ಬಾರ್ ಗೆ ಪುಕ್ಕಟೆ ಪಿಕ್ ಅಪ್- ಡ್ರಾಪ್, ಆಟೋ ಇದೆ ಗುರೂ..
Recommended Video

ಉಡುಪಿ, ಮಾರ್ಚ್ 15 : ಮದುವೆ, ಮುಂಜಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅಥವಾ ಚುನಾವಣಾ ಸಂದರ್ಭದಲ್ಲಿ ದೂರದ ಮತಗಟ್ಟೆಗಳಿಗೆ ತೆರಳಲು ಉಚಿತ ವಾಹನ ವ್ಯವಸ್ಥೆ ಮಾಡುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ, ಆದರೆ ಬಾರ್ ಗೆ ತೆರಳಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದರೆ ಹೇಗೆ ?
ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಇಂತಹದೊಂದು ಉಚಿತ ವ್ಯವಸ್ಥೆ ಉಡುಪಿ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಇಂತಹದೊಂದು ವ್ಯವಸ್ಥೆ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಅಜೆಕಾರಿನಲ್ಲಿ ನೂತನವಾಗಿ ಆರಂಭವಾಗಿರುವ ರಚನಾ ಬಾರ್ ನಲ್ಲಿ ಈ ಸೌಲಭ್ಯವಿದೆ. ಈ ಹಿನ್ನೆಲೆಯಲ್ಲಿ ಪರಿಸರದ ಮದ್ಯಪಾನ ಪ್ರಿಯರಿಗೆ ಬಾರ್ ಕೈ ಬೀಸಿ ಕರೆಯುತ್ತಿದೆ. ಈ ರಚನಾ ಬಾರ್ ಗೆಂದೇ ತೆರಳುವವರಿಗೆ ರಿಕ್ಷಾವೊಂದನ್ನು ಕಾಯಂ ವ್ಯವಸ್ಥೆ ಮಾಡಲಾಗಿದೆ.

ಈ ರಚನಾ ಬಾರ್ ಹೆದ್ದಾರಿಯಿಂದ 550 ಮೀಟರ್ ದೂರದಲ್ಲಿ ಆರಂಬಿಸಲಾಗಿತ್ತು. ಇದು ಸುಪ್ರೀಂ ಕೋರ್ಟ್ ಆದೇಶದ ಪರಿಣಾಮ. ಆದರೆ ಬಾರ್ ತುಸು ದೂರ ಇರುವ ಕಾರಣ ದಿನದಿಂದ ದಿನಕ್ಕೆ ವ್ಯವಹಾರ ಕುಸಿಯುತ್ತಿತ್ತು. ಕಡೆಗೆ ಐಡಿಯಾ ಮಾಡಿದ ಬಾರ್ ನ ಮಾಲೀಕರು ಉಚಿತ ಪಿಕ್ ಅಪ್- ಡ್ರಾಪ್ ಸೇವೆಯನ್ನು ವ್ಯವಸ್ಥೆ ಮಾಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಾರ್ ಗೆ ಗ್ರಾಹಕರು ಬರಲು ಹಾಗು ವಾಪಸ್ ತೆರಳುಲು ಕಾಯಂ ಆಗಿ ರಿಕ್ಷಾ ಒಂದನ್ನು ಇರಿಸಲಾಗಿದೆ. ಬಾರ್ ಗಾಗಿಯೇ ಗೊತ್ತುಪಡಿಸಲಾಗಿರುವ ರಿಕ್ಷಾದ ಹಿಂಭಾಗದಲ್ಲಿ ಬಾರ್ ನ ಹೆಸರು ಸಹಿತ ಉಚಿತ ವಾಹನ ವ್ಯವಸ್ಥೆ ಇದೆ ಎಂಬ ಬ್ಯಾನರ್ ತೂಗು ಹಾಕಲಾಗಿದೆ. ಅಜೆಕಾರು ಪೇಟೆಯಿಂದ ಸ್ವಲ್ಪ ದೂರದಲ್ಲಿರುವ ಈ ಬಾರ್ ಗೆ ನಿತ್ಯ ತೆರಳಲು ಈ ರಿಕ್ಷಾ ಅನುಕೂಲ ಕಲ್ಪಿಸಿದೆ.

ಗ್ರಾಹಕರನ್ನು ಕರೆತಂದು ವಾಪಸ್ ಬಿಡಲು ರಿಕ್ಷಾ ವ್ಯವಸ್ಥೆ ಇರುವುದರಿಂದ ಬಾರ್ ನ ವ್ಯವಹಾರ ಈಗ ಚೇತರಿಸಿಕೊಂಡಿದೆ. ಇನ್ನು ಕುಡಿದ ಮತ್ತಿನಲ್ಲಿ ದಾರಿ ಉದ್ದಕ್ಕೂ ತೂರಾಡಿ ಅಂಗಡಿ ಪಕ್ಕ, ಬಸ್ ನಿಲ್ದಾಣ , ಮೋರಿ ಗಳಲ್ಲಿ ಬೀಳುವ ಆತಂಕದಿಂದ ಅಜೆಕಾರಿನ ಮದ್ಯ ವ್ಯಸನಿ ಗಳು ಮುಕ್ತರಾಗಿದ್ದಾರೆ. ಸೇಫಾಗಿ ಮನೆ ಸೇರುವ ಖಾತ್ರಿಯನ್ನು ಬಾರ್ ಮಾಲೀಕರು ನೀಡಿದ್ದಾರೆ. ಆದರೆ ರಿಕ್ಷಾ ಚಾಲಕನೇ ಟೈಟಾದರೆ ಗತಿಯೇನು ಎಂಬುದು ಪ್ರಶ್ನೆ.












Click it and Unblock the Notifications