Bengaluru Airport: ಮಳೆ ಅಬ್ಬರಕ್ಕೆ 30 ವಿಮಾನಗಳ ಮಾರ್ಗ ಬದಲು, ಏರ್‌ಪೋರ್ಟ್ ಟರ್ಮಿನಲ್‌ನಲ್ಲಿ ನೀರು ಸೋರಿಕೆ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA)ದಿಂದ ನಿತ್ಯ ನೂರಾರು ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸುತ್ತವೆ. ಕಳೆದ ಮೂರು ದಿನಗಳಿಂದ ನಗರಾದ್ಯಂತ ಮಳೆ ಅಬ್ಬರ ಕಂಡು ಬಂದಿದೆ. ವಾತಾವರಣ ಬದಲಾದ ಕಾರಣದಿಂದ ಮಾರ್ಚ್ 18 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ 30 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳನ್ನು ಹವಾಮಾನ ವೈಪರೀತ್ಯ ಕಾರಣಕ್ಕೆ ನೆರೆಯ ಚೆನ್ನೈ, ಕೊಯಮತ್ತೂರು ಮತ್ತು ಹೈದರಾಬಾದ್ ನಗರಗಳಿಗೆ ತಿರುಗಿಸಲಾಗಿದೆ. ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳ ಪೈಕಿ ಮೂರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನಗಳಾಗಿವೆ ಎಂದು ಮನ ಕಂಟ್ರೋಲ್ ವರದಿ ಮಾಡಿದೆ.

ವರ್ಷದ ಮೊದಲ ಮಳೆಗೆ ದೇವನಹಳ್ಳಿಯಲ್ಲಿರುವ ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ 1 ರಲ್ಲಿ ಛಾವಣಿಗಳು ಸೋರಿವೆ. ಭಾರೀ ಮಳೆ ಸುರಿದ ಪರಿಣಾಮ ಟರ್ಮಿನಲ್ ಛಾವಣಿ ಮೇಲಿಂದ ನೀರು ಒಳಗೆ ಸೋರಿದ್ದು, ಪ್ರಯಾಣಿಕರಿಗೆ ಕಿರಿ ಕಿರಿ ಉಂಟು ಮಾಡಿದೆ. ಮಾರ್ಚ್ 18 ರಂದು ಕರ್ನಾಟಕದ ಕೆಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಸಾಮಾನ್ಯ ಮಳೆ ಆಗಿದೆ. ನಗರದಿಂದ ಏರ್‌ಪೋರ್ಟ್ ಕಡೆಗೆ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದ್ದು, ಮಳೆಗೆ ಸವಾರರು ತೊಂದರೆ ಅನುಭವಿಸಿದರು.
ಇಂದು ಮಾರ್ಚ್ 19 (ಬೆಳಗ್ಗೆ) ರಂದು ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 64.8 ಮಿಮೀ ಮಳೆ ಹಾಗೂ ಬೆಂಗಳೂರು ನಗರದಲ್ಲಿ 7ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಳೆಗೆ ನಗರದಲ್ಲಿ ಸಂಚಾರ ಅಸ್ತವ್ಯಸ್ತ
ಬೆಂಗಳೂರು ಏರ್‌ಪೋರ್ಟ್ ನಲ್ಲಿ ಛಾವಣಿ ಸೋರಿದರೆ, ರಸ್ತೆಗಳ ಮೇಲೆ ಒಳಚರಂಡಿ ನೀರು ಉಕ್ಕಿ ಹರಿಯಿತು. ಮಳೆ ನೀರು ಸರಾಗವಾಗಿ ಹರಿಯದೇ, ಕೆಲವು ಮೇಲ್ಸೇತುವೆ ಮೇಲೆ ನೀರು ನಿಂತಿದ್ದು ಕಂಡು ಬಂತು. ರಸ್ತೆ ಅಂಡರ್‌ಪಾಸ್‌ಗಳಲ್ಲಿ ಸಹಿತ ವಾಹನ ಸಂಚಾರಕ್ಕೆ ತೊಂದರೆ ಆಯಿತು. ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನಲ್ಲಿ ಮಳೆ ಬಂದಾಗ ನಾಗರಿಕರು ನಗರದ ಮೂಲಸೌಕರ್ಯ ಸಮಸ್ಯೆ ಕುರಿತು, ಮಳೆ ದಾಖಲಾತಿ, ಆವಾಂತರಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಎಕ್ಸ್‌ನಲ್ಲಿ ಏರ್‌ಪೋರ್ಟ್ ಛಾವಣಿ ಸೋರಿಕೆ ಸಹ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಮಳೆಗೆ ಟರ್ಮಿನಲ್ ಛಾವಣಿ ನೀರು ಸೋರಿಕೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಅಧಿಕಾರಿಗಳು ಕೂಡಲೇ ಪರಿಹರಿಸಿದ್ದಾಗಿ ಮಾಹಿತಿ ನೀಡಿದ್ದಾರೆ.












Click it and Unblock the Notifications