ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ಆಕಾಂಕ್ಷಿಯಾಗಿರುವ ಲಕ್ಷಾಂತರ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಕೇಂದ್ರ ಲೋಕಸೇವಾ ಆಯೋಗದ (UPSC) ಮಾದರಿಯಲ್ಲಿಯೇ ಇನ್ನು ಮುಂದೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕವೂ ಪ್ರತಿ ವರ್ಷ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ (ಗ್ರೂಪ್ ಎ ಮತ್ತು ಬಿ) ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ಕೆಪಿಎಸ್‌ಸಿಯಲ್ಲಿ ಮಹತ್ತರ ಸುಧಾರಣೆ
ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ ಅಕ್ರಮಗಳ ಆರೋಪಗಳು ಹಾಗೂ ಇದರಿಂದ ಉಂಟಾಗುತ್ತಿರುವ ನ್ಯಾಯಾಂಗ ವ್ಯಾಜ್ಯಗಳಿಗೆ ಶಾಶ್ವತ ಮುಕ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅನುಸರಿಸುತ್ತಿರುವ ಪಾರದರ್ಶಕ ಹಾಗೂ ಅತ್ಯುತ್ತಮ ಕ್ರಮಗಳನ್ನು ಕೆಪಿಎಸ್‌ಸಿಯಲ್ಲೂ ಅಳವಡಿಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇಲಾಖೆಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದ್ದಾರೆ.

ಸಾಮಾನ್ಯವಾಗಿ ಕೆಪಿಎಸ್‌ಸಿ ನೇಮಕಾತಿ ಅಧಿಸೂಚನೆಗಳು ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ಪ್ರಕಟವಾಗುತ್ತಿದ್ದವು. ಇದರಿಂದಾಗಿ ನಿರಂತರವಾಗಿ ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿರುವ ಯುವ ಅಭ್ಯರ್ಥಿಗಳಿಗೆ ವಯೋಮಿತಿ ಮೀರಿ ಅನ್ಯಾಯವಾಗುತ್ತಿತ್ತು. ಪರಿಣಾಮ, ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದರಿಂದ ಆಯೋಗವು ಸಾಲು ಸಾಲು ವ್ಯಾಜ್ಯಗಳನ್ನು ಎದುರಿಸುವಂತಾಗಿತ್ತು. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು, ಯುಪಿಎಸ್‌ಸಿ ಮಾದರಿಯಲ್ಲಿ ನಿರ್ದಿಷ್ಟ ದಿನಾಂಕಗಳೊಂದಿಗೆ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ನಿಗದಿಪಡಿಸಲು ತೀರ್ಮಾನಿಸಲಾಗಿದೆ.
ಮುಂಗಡವಾಗಿ ಐದು ವರ್ಷಗಳ ವೇಳಾಪಟ್ಟಿ ಪ್ರಕಟ
ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನಿಖರ ಅಂದಾಜು ಮಾಡಿ, ಹಣಕಾಸು ಇಲಾಖೆಯಿಂದ ತತ್ವಾಧಾರಿತ ಅನುಮೋದನೆ ಪಡೆಯಲಾಗುತ್ತದೆ. ಆ ಬಳಿಕ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇಲಾಖೆಗಳು ಡಿಪಿಎಆರ್‌ಗೆ ಮಾಹಿತಿ ನೀಡಲಿವೆ. ಈ ಸಂಪೂರ್ಣ ಪ್ರಕ್ರಿಯೆಯ ಆಧಾರದ ಮೇಲೆ ಮುಂಚಿತವಾಗಿಯೇ ಐದು ವರ್ಷಗಳ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕೃಷ್ಣ ಬೈರೇಗೌಡರು ವಿವರಿಸಿದ್ದಾರೆ.
ಮರುಪರೀಕ್ಷೆ ಇಲ್ಲ - ವದಂತಿಗಳಿಗೆ ಸ್ಪಷ್ಟನೆ
2023-24ನೇ ಸಾಲಿನಲ್ಲಿ ಕೆಪಿಎಸ್‌ಸಿ ಮೂಲಕ ನಡೆದ 384 ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಸದನದಲ್ಲಿ ನಡೆದ ಬಿಸಿಬಿಸಿ ಚರ್ಚೆಗೆ ಸಚಿವರು ಸ್ಪಷ್ಟ ಉತ್ತರ ನೀಡಿದರು. ಮಾರ್ಚ್ 2ರಂದು ಪ್ರಕಟವಾದ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ, ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ ಸುಮಾರು 11 ಮಂದಿ ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದ್ದವು.
ಆದರೆ, ಈ ಆರೋಪಗಳನ್ನು ತಳ್ಳಿಹಾಕಿದ ಸಚಿವರು, ಯಾವುದೇ ಕಾರಣಕ್ಕೂ ಮರುಪರೀಕ್ಷೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಯಾವುದೇ ರೀತಿಯ ದುರುಪಯೋಗ ನಡೆದಿಲ್ಲ ಎಂಬ ವರದಿಯನ್ನು ಕೆಪಿಎಸ್‌ಸಿ ಸಲ್ಲಿಸಿದೆ. ಆಯ್ಕೆಯಾಗಿರುವ ಈ 11 ಅಭ್ಯರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಅವರ ನಡುವೆ ಯಾವುದೇ ಸಂಬಂಧವಿಲ್ಲ" ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. ಒಂದು ವೇಳೆ ಈಗ ಮರುಪರೀಕ್ಷೆ ನಡೆಸಿದರೆ, ಇಡೀ ನೇಮಕಾತಿ ಪ್ರಕ್ರಿಯೆ ಕನಿಷ್ಠ ಎರಡು ವರ್ಷ ವಿಳಂಬವಾಗಲಿದೆ ಹಾಗೂ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ 5,800 ಅಭ್ಯರ್ಥಿಗಳ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು.
ಹಾಲಿ 18 ಸದಸ್ಯರಿರುವ ಕೆಪಿಎಸ್‌ಸಿ ಭ್ರಷ್ಟಾಚಾರಕ್ಕೆ ಸುದ್ದಿಯಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಯಮಾವಳಿಗಳ ಪ್ರಕಾರ ಹಾಲಿ ಸದಸ್ಯರ ಅಧಿಕಾರಾವಧಿ ಮುಗಿಯುವವರೆಗೆ ಅವರ ಸಂಖ್ಯೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಆದರೆ, 2027ರ ಮೇ ತಿಂಗಳ ವೇಳೆಗೆ ಆಯೋಗದ ಸದಸ್ಯರ ಸಂಖ್ಯೆ ತಾನಾಗಿಯೇ ಎಂಟಕ್ಕೆ ಇಳಿಕೆಯಾಗಲಿದೆ ಎಂದರು. ಇದೇ ವೇಳೆ, ಕೆಪಿಎಸ್‌ಸಿಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರುವ ಉದ್ದೇಶದಿಂದ ಎಲ್ಲ ಪಕ್ಷಗಳ ಶಾಸಕರನ್ನು ಒಳಗೊಂಡ ವಿಶೇಷ 'ಸದನ ಸಮಿತಿ'ಯನ್ನು ಸರ್ಕಾರ ಶೀಘ್ರದಲ್ಲೇ ರಚಿಸಲಿದೆ ಎಂದು ತಿಳಿಸಿದರು.
-
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications