ಕಡಲುಪ್ರಿಯರಿಗೊಂದು ನೆಪ ಮಾಡಿಕೊಟ್ಟ ಮಲ್ಪೆಯ "ಬೀಚ್ ಉತ್ಸವ"
ಉಡುಪಿ, ಫೆಬ್ರವರಿ 03: ಬಿಸಿಲಿಗೆ ಮೈಯೊಡ್ಡಿ ಕಾದ ಮರಳಿನಲ್ಲಿ ಕ್ರೀಡಾಕೂಟ ನಡೆಸುವುದೇ ಮಜಾ. ಕಾದ ಮರಳ ಮೇಲೆ ಆಟ ಆಡಿ ಸಮುದ್ರಕ್ಕೆ ಜಿಗಿದು ದೇಹವನ್ನು ತಂಪು ಮಾಡಿಕೊಳ್ಳುವ ಆ ಅನುಭವದ ಖುಷಿ ಅನುಭವಿಸಿದವರಿಗಷ್ಟೇ ಗೊತ್ತು. ಈ ಒಂದು ಅನುಭವವನ್ನು ನೀಡಲೆಂದೇ ಉಡುಪಿಯ ಮಲ್ಪೆಯಲ್ಲಿ ಎರಡು ದಿನಗಳ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬೀಚ್ ಉತ್ಸವದಲ್ಲಿ ಥರಾವರಿ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಶ್ವಾನಪ್ರದರ್ಶನ, ವಾಲಿಬಾಲ್, ಹಗ್ಗಜಗ್ಗಾಟ, ಈಜು, ಚಿತ್ರಕಲೆ, ಮರಳು ಶಿಲ್ಪ ರಚನೆ, ಗಾಳಿಪಟ ಪ್ರದರ್ಶನ... ಹೀಗೆ ಅನೇಕ ಸ್ಪರ್ಧೆಗಳು ನಡೆದು ಯುವಜನರ ಕಣ್ಮನ ತಣಿಸಿದವು. ಕ್ರೀಡಾಕೂಟದಲ್ಲಿ ನೂರಾರು ಮಂದಿ ಭಾಗವಹಿಸಿ ಸಂಭ್ರಮಪಟ್ಟರು.

ಎರಡು ದಿನಗಳ ಕಾಲವೂ ಸಮುದ್ರದ ತೀರ ಜನರಿಂದ ತುಂಬಿಕೊಂಡಿತ್ತು. ತೀರದಲ್ಲಿ ಹಮ್ಮಿಕೊಂಡಿದ್ದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಾರುವ ಮರಳಲ್ಲಿ ಪಾದವನ್ನು ಊರಿ ಹಗ್ಗ ಎಳೆಯುವ ಸ್ಪರ್ಧೆಯನ್ನು ನೋಡುವುದೇ ಹಬ್ಬ. ಹವ್ಯಾಸಿ ಮರಳು ಶಿಲ್ಪಿಗಳು ನಾನಾ ತರಹದ ಕಲಾಕೃತಿಗಳನ್ನು ಮರಳಲ್ಲಿ ಮೂಡಿಸಿ ನೋಡುಗರನ್ನು ಮೋಡಿ ಮಾಡಿದರು.

ಬಿಸಿಲೇರುತ್ತಿರುವಂತೆಯೇ ಬೀಚ್ ನತ್ತ ಜನಸಾಗರವೇ ಹರಿದು ಬರುತ್ತಿತ್ತು. ಬೀಚ್ ಉತ್ಸವಕ್ಕೆ ಬಂದವರಿಗಾಗಿ ಥರಾವರಿ ಮೀನುಗಳ ಖಾದ್ಯಗಳನ್ನೂ ಸಿದ್ಧಪಡಸಲಾಗಿತ್ತು. ಜನರು ಅಲೆಯಲ್ಲಿ ಮನಸೋ ಇಚ್ಛೆ ಆಡಿ ಮರಳಲ್ಲಿ ನಡೆದ ಕ್ರೀಡೆಗಳನ್ನು ಕಣ್ತುಂಬಿಕೊಂಡು ಮೀನಿನ ರುಚಿ ಸವಿದರು.













Click it and Unblock the Notifications