Tumkur: ಜನವರಿ 20ರಿಂದ ಜಿಲ್ಲೆಯಲ್ಲಿ 21 ಕೊಬ್ಬರಿ ಖರೀದಿ ಕೇಂದ್ರ ಆರಂಭ: ಬೆಲೆ, ಖರೀದಿ ಕೇಂದ್ರ ಮಾಹಿತಿ
ನಾಫೆಡ್ ಕೇಂದ್ರ ತೆರೆದು ಕೇಂದ್ರ ಸರ್ಕಾರ ಕೊಬ್ಬರಿಗೆ ನಿಗದಿಪಡಿಸಿರುವ ₹12000 ಜೊತೆಗೆ ರಾಜ್ಯ ಸರ್ಕಾರ ₹3000 ಸೇರಿಸಿ ಕೊಬ್ಬರಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದ ತೆಂಗು ಬೆಳೆಗಾರರು ಹೋರಾಟ ಮಾಡುತ್ತಿರುವ ಬೆನ್ನಲ್ಲೇ, ನಾಫೆಡ್ ಕೇಂದ್ರ ತೆರೆದು ಕೊಬ್ಬರಿ ಖರೀದಿ ಮಾಡಲು ನಿರ್ಧರಿಸಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಜನವರಿ 20 ರಿಂದ ನಾಫೆಡ್ ಕೇಂದ್ರಗಳಲ್ಲಿ ಕೊಬ್ಬರಿ ಖರೀದಿ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಕುಣಿಗಲ್ ತಾಲೂಕುಗಳಲ್ಲಿ ಒಟ್ಟು 21 ಖರೀದಿ ಕೇಂದ್ರಗಳನ್ನು ತೆರೆಯಲಿದ್ದು ಕೊಬ್ಬರಿ ಖರೀದಿ ಮಾಡಲಿದೆ.

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಕೊಬ್ಬರಿ ಖರೀದ ಮಾಡುವ ನಿರ್ಧಾರ ಮಾಡಲಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು ಕೇಂದ್ರ?
ಜನವರಿ 20ರಿಂದ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಬೇಕು, ಯಾವುದೇ ಗೊಂದಲಗಳು ಆಗದಂತೆ ನೋಡಿಕೊಳ್ಳಬೇಕು. ತಿಪಟೂರು ಮತ್ತು ತುರುವೇಕೆರೆ ತಾಲೂಕಿನಲ್ಲಿ ತಲಾ 6 ಖರೀದಿ ಕೇಂದ್ರ ತೆರೆಯಬೇಕು. ಗುಬ್ಬಿ, ಹುಳಿಯಾರು, ಚಿಕ್ಕನಾಯಕನಹಳ್ಳಿಯಲ್ಲಿ ತಲಾ ಎರಡು ಖರೀದಿ ಕೇಂದ್ರಗಳು ಹಾಗೂ ತುಮಕೂರು, ಶಿರಾ ಹಾಗೂ ಕುಣಿಗಲ್ ತಾಲೂಕಿನ ತಲಾ ಒಂದು ಖರೀದಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಪ್ರತಿ ದಿನ ಖರೀದಿ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು, ಖರೀದಿ ಕೇಂದ್ರದಲ್ಲಿ ರೈತರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ವಿಂಟಾಲ್‌ಗೆ ₹12 ಸಾವಿರ
ಉತ್ತಮ ಗುಣಮಟ್ಟದ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ ₹12000 ಬೆಲೆ ನಿಗದಿ ಮಾಡಲಾಗಿದೆ. ಜನವರಿ 20ರಿಂದ ಖರೀದಿ ಆರಂಭವಾಗಲಿದ್ದು 45 ದಿನಗಳವರೆಗೆ ಕೊಬ್ಬರಿಯನ್ನು ಖರೀದಿ ಮಾಡಲಾಗುತ್ತದೆ. ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 20 ಕ್ವಿಂಟಾಲ್ ಪ್ರಮಾಣವನ್ನು ನಿಗದಿ ಮಾಡಲಾಗಿದೆ.
ರೈತರಿಂದ ಮಾತ್ರ ಕೊಬ್ಬರಿ ಖರೀದಿ ಮಾಡಬೇಕು, ರೈತರ ಸೋಗಿನಲ್ಲಿ ಬರುವ ವರ್ತಕರಿಂದ ಖರೀದಿ ಮಾಡದಂತೆ ಸೂಚನೆ ನೀಡಲಾಗಿದೆ. ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಕೊಬ್ಬರಿ ಖರೀದಿ ಹಣ ಜಮೆಯಾಗುವಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.












Click it and Unblock the Notifications