ಕೋಯಿಕ್ಕೋಡ್; ದೊಡ್ಡ ವಿಮಾನಗಳ ಬಳಕೆಗೆ ನಿಷೇಧ
ತಿರುವನಂತಪುರಂ, ಆಗಸ್ಟ್ 11 : ಮುಂಗಾರು ಅವಧಿಯಲ್ಲಿ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ದೊಡ್ಡ ವಿಮಾನಗಳ ಲ್ಯಾಂಡಿಂಗ್‌ಗೆ ನಿಷೇಧ ಹೇರಲಾಗಿದೆ. ಆಗಸ್ಟ್ 7ರಂದು ವಿಮಾನದ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿ 18 ಪ್ರಯಾಣಿಕರು ಮೃತಪಟ್ಟಿದ್ದರು.
ಭಾರತೀಯ ವಿಮಾನಯಾನ ಪ್ರಾಧಿಕಾರ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ. ಆಗಸ್ಟ್ 7ರಂದು ನಡೆದ ದುರಂತಕ್ಕೆ ಹವಾಮಾನವೇ ಕಾರಣವಾಗಿದೆ. ಸರಿಯಾಗಿ ರನ್ ವೇ ಕಾಣಿಸದ ಕಾರಣ ಲ್ಯಾಂಡಿಂಗ್ ವೇಳೆ ಅಪಘಾತ ನಡೆದಿತ್ತು.
ಮುಂಗಾರು ಅವಧಿಯಲ್ಲಿ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ದೊಡ್ಡ ವಿಮಾನಗಳನ್ನು ಇಳಿಸುವಂತಿಲ್ಲ ಎಂದು ಪ್ರಾಧಿಕಾರ ಸೂಚನೆ ನೀಡಿದೆ. ದುಬೈನಿಂದ ವಂದೇ ಭಾರತ್ ಮಿಷನ್ ಅಡಿ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ರನ್ ವೇ ಬಿಟ್ಟು ಜಾರಿ ಹೋಗಿ ಎರಡು ಭಾಗವಾಗಿತ್ತು.

ಮಳೆಗಾಲ ಮುಗಿಯುವ ತನಕ ಕೋಯಿಕ್ಕೋಡ್ ವಿಮಾನ ನಿಲ್ದಾಣವನ್ನು ದೊಡ್ಡ ವಿಮಾನಗಳ ಹಾರಾಟಕ್ಕೆ ಬಳಕೆ ಮಾಡುವಂತಿಲ್ಲ. ಆಗಸ್ಟ್ 7ರಂದು ನಡೆದ ಅಪಘಾತದಲ್ಲಿ 18 ಜನರು ಮೃತಪಟ್ಟಿದ್ದರು, 56 ಪ್ರಯಾಣಿಕರು ಗಾಯಗೊಂಡಿದ್ದರು.
ಕೋಯಿಕ್ಕೋಡ್ ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್‌ವೇ ಇದ್ದರೆ ಅದು ಟೇಬಲ್ ಟಾಪ್ ವಿಮಾನ ನಿಲ್ದಾಣವಾಗುತ್ತದೆ. ಮಂಗಳೂರಿನಲ್ಲಿರುವುದು ಸಹ ಟೇಬಲ್ ಟಾಪ್ ನಿಲ್ದಾಣವಾಗಿದೆ.
ಜೋರು ಮಳೆಯ ಕಾರಣ ವಿಮಾನ ನಿಲ್ದಾಣದ ರನ್ ವೇ ಗುರುತಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ, ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ದುರಂತ ನಡೆದಿತ್ತು. ಆದ್ದರಿಂದ, ಮಳೆಗಾಲದ ಅವಧಿಯಲ್ಲಿ ಚಿಕ್ಕ ವಿಮಾನಗಳು ಮಾತ್ರ ಇಲ್ಲಿಂದ ಹಾರಾಟ ನಡೆಸಬಹುದು.












Click it and Unblock the Notifications