ಕೇರಳದಲ್ಲಿ ಆತಂಕ ಮೂಡಿಸಿದ ಶಿಗೆಲ್ಲಾ: ಏನಿದು ಸೋಂಕು?
ತಿರುವನಂತಪುರಂ, ಡಿಸೆಂಬರ್ 21: ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕಿಗೆ 11 ವರ್ಷದ ಮಗುವೊಂದು ಮೃತಪಟ್ಟಿದ್ದು, ಈ ಸೋಂಕಿನ ಬಗ್ಗೆ ಜನರು ತೀವ್ರ ಜಾಗ್ರತೆ ವಹಿಸುವಂತೆ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಸೂಚನೆ ನೀಡಿದ್ದಾರೆ. ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಮತ್ತೆ ಏರಿಕೆಯಾಗುತ್ತಿರುವುದರ ನಡುವೆ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕು ಆತಂಕ ಮೂಡಿಸಿದೆ. ರಾಜ್ಯದ ಉತ್ತರ ಭಾಗದ ಅನೇಕ ಪ್ರದೇಶಗಳಲ್ಲಿ ಶಿಗೆಲ್ಲಾ ಸೋಂಕು ಕಾಣಿಸಿಕೊಂಡಿದೆ.
ಕೇರಳದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕು ಪತ್ತೆಯಾಗಿದ್ದು ಇದೇ ಮೊದಲ ಸಲವೇನಲ್ಲ. ಈ ಹಿಂದೆಯೂ ಹಲವು ಬಾರಿ ಈ ಪ್ರಕರಣಗಳು ವರದಿಯಾಗಿದ್ದವು ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
'ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾ ಕಲುಷಿತ ನೀರಿನಿಂದ ಹರಡುತ್ತದೆ. ಹೀಗಾಗಿ ಅಧಿಕ ಸಾಂದ್ರತೆಯ ಜನಸಂಖ್ಯೆ ಇರುವಲ್ಲಿ ಜನರು ನೀರನ್ನು ಕುದಿಸಿ ಕುಡಿಯುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಈ ಎಚ್ಚರಿಕೆಯನ್ನು ಪಾಲಿಸಬೇಕು. ಹಾಗೆಯೇ ಸೂಕ್ತ ರೀತಿಯಲ್ಲಿ ಸ್ವಚ್ಛತೆ ಕಾಪಾಡಬೇಕು' ಎಂದು ಅವರು ಸಲಹೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಯನಾಡ್ ಮತ್ತು ಇತರೆ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಸೋಂಕು ಕಂಡುಬಂದ ಪ್ರದೇಶಗಳಲ್ಲಿ ನೀರು ಹಾಗೂ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಪಡೆಯಲಾಗಿದೆ. ಮುಂದೆ ಓದಿ.

26ರಲ್ಲಿ ಆರು ಖಚಿತ
ಕೋಯಿಕ್ಕೋಡ್‌ನಲ್ಲಿ ಕಳೆದ ಕೆಲವು ದಿನಗಳಲ್ಲಿ 26 ಅತಿಸಾರದ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಆರು ಪ್ರಕರಣಗಳು ಶಿಗೆಲ್ಲಾ ಸೋಂಕಿಗೆ ಸಂಬಂಧಿಸಿದ್ದು ಎಂದು ಖಚಿತವಾಗಿದೆ. ತೀವ್ರ ಪ್ರಬಲ ವೈರಸ್ ಸೋಂಕು ರೋಗಿಗಳಲ್ಲಿ ಅತಿಸಾರ ಉಂಟುಮಾಡುವುದು ಇದರ ಪ್ರಮುಖ ಲಕ್ಷಣವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ವಿ. ಜಯಶ್ರೀ ತಿಳಿಸಿದ್ದಾರೆ.

ಏನಿದು ಶಿಗೆಲ್ಲಾ?
ಅಪಾಯಕಾರಿ ವೈರಾಣು ಸೋಂಕನ್ನು ಸಾಮಾನ್ಯವಾಗಿ ಶಿಗೆಲ್ಲೊಸಿಸ್ ಎಂದು ಕರೆಯಲಾಗುತ್ತದೆ. ಇದು ಶಿಗೆಲ್ಲಾ ಬ್ಯಾಕ್ಟೀರಿಯಾದಿಂದ ಬರುವಂಥದ್ದು. 10 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಶಿಗೆಲ್ಲಾ ಸೋಂಕಿಗೆ ಒಳಗಾಗುತ್ತಾರೆ. ಕಲುಷಿತ ನೀರು ಅಥವಾ ಹಳಸಿದ ಆಹಾರ ಸೇವನೆಯಿಂದ ವ್ಯಕ್ತಿಗೆ ಶಿಗೆಲ್ಲಾ ಸೋಂಕು ತಗುಲಬಹುದು. ಮಾತ್ರವಲ್ಲ, ಸೋಂಕಿತ ವ್ಯಕ್ತಿ ಬಳಸಿದ ಶೌಚಾಲಯ ಉಪಯೋಗಿಸಿದಾಗಲೂ ಸೋಂಕು ಹರಡಬಹುದು.

ಶಿಗೆಲ್ಲಾ ಲಕ್ಷಣಗಳು
ಶಿಗೆಲ್ಲಾ ಸೋಂಕಿನ ಅತ್ಯಂತ ಪ್ರಮುಖ ಲಕ್ಷಣವೆಂದರೆ ಅತಿಸಾರ (ಡಯೇರಿಯಾ). ಇದರ ಜತೆಗೆ ರೋಗಿಗಳಲ್ಲಿ ಜ್ವರ ಮತ್ತು ಹೊಟ್ಟೆ ನೋವು ಕೂಡ ಕಾಣಿಸಿಕೊಳ್ಳಬಹುದು. ಶಿಗೆಲ್ಲಾ ಸೋಂಕು ತಗುಲಿದ ಒಂದು ಅಥವಾ ಎರಡು ದಿನಗಳಲ್ಲಿ ಅದರ ಲಕ್ಷಣಗಳು ಕಾಣಿಸಲು ಆರಂಭಿಸುತ್ತದೆ. ಈ ಲಕ್ಷಣಗಳು ಒಂದು ವಾರದವರೆಗೂ ಇರಬಹುದು.

ಮುನ್ನೆಚ್ಚರಿಕೆ ಕ್ರಮಗಳು
ಕುದಿಸಿದ ಸ್ವಚ್ಛ ನೀರು ನೀರು ಕುಡಿಯುವುದು, ಆಹಾರದ ಬಳಕೆಯಲ್ಲಿ ಎಚ್ಚರಿಕೆ ಮತ್ತು ಆಗಾಗ್ಗೆ ಕೈಗಳನ್ನು ಸೋಪು ಬಳಸಿ ತೊಳೆಯುವುದು ಮುಖ್ಯವಾಗಿದೆ.
ಸೋಂಕು ತಗುಲಿದವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದು, ಅವರಲ್ಲಿ ಕೆಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರಲ್ಲಿ ಯಾರೂ ಗಂಭೀರ ಸ್ಥಿತಿಗೆ ಒಳಗಾಗಿಲ್ಲ. ಕೋಯಿಕ್ಕೋಡ್‌ನಲ್ಲಿ 56 ಶಂಕಿತರ ಮಾದರಿಗಳನ್ನು ಪರೀಕ್ಷಿಸಲಾಗಿತ್ತು, ಆದರೆ ಅವರಲ್ಲಿ ಆರು ಮಂದಿಯಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ.












Click it and Unblock the Notifications