ಶಬರಿಮಲೆ ಗರ್ಭಗುಡಿ ಮುಚ್ಚಲು ರಾಜಮನೆತನದ ಆದೇಶ?
ತಿರುವನಂತಪುರಂ, ಅ 19: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಸುಪ್ರೀಂಕೋರ್ಟ್ ಆದೇಶ, ಕೇರಳ ಸರಕಾರಕ್ಕೆ ನುಂಗಲಾರದ ತುತ್ತಾಗುತ್ತಿದ್ದು, ಪಂಡಾಲಂ ರಾಜಮನೆತನ ಖಡಕ್ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತಾಜಾ ಮಾಹಿತಿಯ ಪ್ರಕಾರ, ಮಹಿಳಾ ಭಕ್ತರು ಅಥವಾ ಕಾರ್ಯಕರ್ತರು ದೇವಾಲಯ ಪ್ರವೇಶಿಸಿದ್ದೇ ಆದಲ್ಲಿ, ದೇವಾಲಯವನ್ನು ಮುಚ್ಚುವಂತೆ ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕರಿಗೆ (ತಂತ್ರಿಗಳು) ರಾಜಮನೆತನ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಹೈದರಾಬಾದ್ ಮೂಲದ ಕವಿತಾ ಮತ್ತು ಎರ್ನಾಕುಲುಂ ಮೂಲದ ಫಾತಿಮಾ, ದೇವಾಲಯ ಪ್ರವೇಶಿಸಲು ಮುಂದಾಗಿ ವಿಫಲವಾದ ನಂತರ, ಪಂಡಾಲಂ ರಾಜಮನೆತನ ಈ ನಿರ್ಧಾರಕ್ಕೆ ಬಂದಿದೆ. ರಾಜಮನೆತನದ ಅಧಿಕಾರಿಗಳು ದೇವಾಲಯದ ಪ್ರಧಾನ ಅರ್ಚಕರಾದ ಕಂಡರೂರು ರಾಜೀವರಾರು ಅವರಿಗೆ ಈ ಸಂಬಂಧ ಮನವಿ ಮಾಡಿದ್ದಾರೆ.

ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ, ಪೂಜಾಪದ್ದತಿಗೆ ಯಾವರೀತಿಯಲ್ಲೂ ಚ್ಯುತಿ ಬರಬಾರದು. ಭಾರೀ ಪ್ರತಿಭಟನೆಯ ನಡುವೆಯೂ ಒಂದು ವೇಳೆ 10-50ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸಿದ್ದೇ ಆದಲ್ಲಿ, ದೇವಾಲಯವನ್ನು ಮುಚ್ಚಲು ರಾಜಮನೆತನ ಸೂಚಿಸಿದೆ.

ದೇವಾಲಯದ ಆವರಣದಲ್ಲಿ ಅಹಿತಕರ ಘಟನೆ ನಡೆದರೆ, ದೇವಾಲಯದ ಸಂಪ್ರದಾಯಕ್ಕೆ ಧಕ್ಕೆಯಾಗುತ್ತದೆ, ಇದು ನಾಡಿಗೆ ಶುಭಕರವಲ್ಲ. ಹಾಗಾಗಿ, ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರ, ಅಯ್ಯಪ್ಪಸ್ವಾಮಿಯ ಗರ್ಭಗುಡಿಯನ್ನು ಮುಚ್ಚುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ಪಂಡಾಲಂ ರಾಜಮನೆತನದ ಕಾರ್ಯದರ್ಶಿ ಪಿ ಎನ್ ನಾರಾಯಣ ವರ್ಮ, ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ.
ಈ ನಡುವೆ, ಹಿಂದೂ ಧಾರ್ಮಿಕ ನಂಬಿಕೆಯನ್ನು ಅಪಹಾಸ್ಯ ಮಾಡಬೇಡಿ ಎಂದು ಶಬರಿಮಲೆ ದೇವಾಲಯದ ಪ್ರಧಾನ ತಂತ್ರಿಗಳಾದ ರಾಜೀವರಾರು ಭಾವೋದ್ವೇಗದಿಂದ ಮನವಿ ಮಾಡಿದ್ದಾರೆ. ಗರ್ಭಗುಡಿ ಮುಚ್ಚುವ ವಿಚಾರದಲ್ಲಿ ತಂತ್ರಿಗಳ ನಿರ್ಧಾರವೇ ಅಂತಿಮ ಎನ್ನಲಾಗುತ್ತಿದೆ.












Click it and Unblock the Notifications