Breaking; ಕೇರಳ ನೀಟ್ ಪರೀಕ್ಷೆ ವಿವಾದ, ಸಿಬ್ಬಂದಿ ವಿರುದ್ಧ ಕೇಸ್
ಕೊಲ್ಲಂ, ಜುಲೈ 19: ಕೇರಳದಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಯುವತಿಯರು ಮತ್ತು ಬಾಲಕಿಯರಿಗೆ ತಮ್ಮ ಒಳಉಡುಪು ತೆಗೆದ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇರಳದ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಈ ಘಟನೆ ನಡೆದಿತ್ತು. ಪರೀಕ್ಷೆ ಬರೆಯಲು ಬಂದಿದ್ದ 17 ವರ್ಷದ ಬಾಲಕಿಗೆ ಒಳಉಡುಪು (ಬ್ರಾ) ತೆಗೆಯುವಂತೆ ಹೇಳಲಾಗಿತ್ತು. ಈ ಬಗ್ಗೆ ಬಾಲಕಿಯ ಪೋಷಕರು ಆಕ್ರೋಶ ವ್ತಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದರು.
ಮಹಿಳಾ ಅಧಿಕಾರಿಗಳ ತಂಡವು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಬಾರಿಗೆ ನೀಟ್ ಪರೀಕ್ಷೆಗೆ ಕುಳಿತಿದ್ದ ತನ್ನ ಮಗಳು ತಾನು ಅನುಭವಿಸಿದ ಆಘಾತಕಾರಿ ಅನುಭವದಿಂದ ಇನ್ನೂ ಹೊರಬಂದಿಲ್ಲ ಎಂದು 17 ವರ್ಷದ ಬಾಲಕಿಯ ತಂದೆ ಮಾಧ್ಯಮಗಳಿಗೆ ಸೋಮವಾರ ತಿಳಿಸಿದ್ದರು. ಒಳ ಉಡುಪು ತೆಗೆಸಿ ಆಕೆಯನ್ನು ಪರೀಕ್ಷೆಗೆ ಕೂರಿಸಲಾಗಿದೆ. NEET ಬುಲೆಟಿನ್‌ನಲ್ಲಿ ಉಲ್ಲೇಖಿಸಲಾದ ಡ್ರೆಸ್ ಕೋಡ್‌ನಲ್ಲಿ ಒಳ ಉಡುಪುಗಳ ಬಗ್ಗೆ ಏನನ್ನೂ ಹೇಳಿಲ್ಲ. ಅದರಲ್ಲಿನ ನಿಯಮದಂತೆಯೇ ನಮ್ಮ ಮಗಳು ಬಟ್ಟೆ ಧರಿಸಿದ್ದರು ಎಂದು ತಂದೆ ಮಾಧ್ಯಮಗಳಿಗೆ ತಿಳಿಸಿದ್ದರು.
ಘಟನೆಯನ್ನು ಖಂಡಿಸಿ ವಿವಿಧ ಯುವ ಸಂಘಟನೆಗಳು ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗೆ ಆಯೋಗ ಸೂಚಿಸಿದೆ.
ಈ ಕುರಿತು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 354 ಮತ್ತು 509 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ತು ಸಾವಿರ ವೈದ್ಯಕೀಯ ಆಕಾಂಕ್ಷಿಗಳ ಭದ್ರತಾ ತಪಾಸಣೆಯನ್ನು ನಡೆಸುವುದು ದೊಡ್ಡ ಸವಾಲಾಗಿದೆ. ಅಭ್ಯರ್ಥಿಗಳು ಸ್ಟೇಷನರಿಯನ್ನು ಕೊಂಡೊಯ್ಯದಂತೆ ಮತ್ತು ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಅನುಸರಿಸಲು ತಿಳಿಸಲಾಗಿದೆ. ಇದರಲ್ಲಿ ವ್ಯಾಲೆಟ್‌ಗಳು, ಕೈಚೀಲಗಳು, ಬೆಲ್ಟ್‌ಗಳು, ಕ್ಯಾಪ್‌ಗಳು, ಆಭರಣಗಳು, ಶೂಗಳು ಮತ್ತು ಹೀಲ್ಸ್ ಅನ್ನು ನಿಷೇಧಿಸಲಾಗಿದೆ.












Click it and Unblock the Notifications