ಕಾಶ್ಮೀರೇತರರಿಗೆ ಮತದಾನ ಹಕ್ಕು: ಪ್ರಾಣಾಪಾಯದಲ್ಲಿ ವಲಸೆ ಕಾರ್ಮಿಕರು?
ಶ್ರೀನಗರ್, ಆಗಸ್ಟ್ 23: ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿರುವ ಕಾಶ್ಮೀರೇತರ ಜನರಿಗೆ ಮತದಾನದ ಹಕ್ಕನ್ನು ನೀಡಲಾಗಿರುವುದು ಭಯೋತ್ಪಾದನೆಗೆ ಕುಮ್ಮಕ್ಕು ಕೊಡಬಹುದು ಎಂದು ಕಣಿವೆ ರಾಜ್ಯದ ಸ್ಥಳೀಯ ರಾಜಕೀಯ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.
ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ ಸೋಮವಾರ ನಡೆದ ಕಾಶ್ಮೀರದ ಸರ್ವಪಕ್ಷಗಳ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲಾಯಿತು. ಅಬ್ದುಲ್ಲಾ ಮನೆಯಲ್ಲಿ ನಡೆದ ಸಭೆಯಲ್ಲಿ ಪಿಡಿಪಿ, ಕಾಂಗ್ರೆಸ್, ಶಿವಸೇನಾ, ಜೆಡಿಯು, ಎಡಪಕ್ಷಗಳು ಹಾಗು ಇತರ ಕಾಶ್ಮೀರೀ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
ಕಾಶ್ಮೀರೇತರರಿಗೆ ಮತದಾನ ಹಕ್ಕು ನೀಡಿದ ಕ್ರಮದಿಂದಾಗಿ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರು ಮತ್ತು ಅಲ್ಪಸಂಖ್ಯಾತರ ಪ್ರಾಣಕ್ಕೆ ಉಗ್ರರಿಂದ ಅಪಾಯ ಉಂಟಾಗಬಹುದು ಎಂದು ರಾಜಕೀಯ ಮುಖಂಡರು ಈ ಸಭೆಯಲ್ಲಿ ಅಭಿಪ್ರಾಯಪಟ್ಟರು.

"ವಲಸೆ ಕಾರ್ಮಿಕರ ಮೇಲೆ ದಾಳಿಗಳಾಗುವ ಭೀತಿ ಇದೆ. ಇಂಥ ನಡೆ ಇಡುವ ಮೊದಲು ಅವರು (ಸರಕಾರ) ಇದರ ಬಗ್ಗೆ ಅವರು ಯೋಚಿಸಲಿಲ್ಲ," ಎಂದು ಫಾರೂಕ್ ಅಬ್ದುಲ್ಲಾ ತಿಳಿಸಿದರು.
ಹೆಚ್ಚುತ್ತಿರುವ ಉಗ್ರರ ದಾಳಿ
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ಕಲ್ಪಿಸಲಾಗಿದ್ದು ವಿಶೇಷ ಸ್ಥಾನಮಾನವನ್ನು ಮೂರು ವರ್ಷಗಳ ಹಿಂದೆ ಕೇಂದ್ರ ಸರಕಾರ ಹಿಂಪಡೆದಿತ್ತು. 2019, ಆಗಸ್ಟ್ 5ರಂದು ಆರ್ಟಿಕಲ್ 370 ಮತ್ತು 35A ಅನ್ನು ರದ್ದು ಮಾಡಿತ್ತು. ಅಲ್ಲದೇ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಯಿತು. ಕಣಿವೆ ರಾಜ್ಯದಿಂದ ಲಡಾಖ್ ಪ್ರತ್ಯೇಕಗೊಂಡಿತು.
ಕೇಂದ್ರ ಸರಕಾರದ ಈ ಅನಿರೀಕ್ಷಿತ ನಡೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಹೆಚ್ಚಾಗಿದೆ. ಕೋವಿಡ್ ವಿಕೋಪ ಕಡಿಮೆ ಆದ ಬಳಿಕ ಉಗ್ರರ ಆಟಾಟೋಪ ಹೆಚ್ಚಾಗಿದೆ. ಅನೇಕ ವಲಸೆ ಕಾರ್ಮಿಕರು ಮತ್ತು ಕಾಶ್ಮೀರೀ ಪಂಡಿತರನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿಗಳಾಗುವುದು ಹೆಚ್ಚಾಗಿದೆ.
ಕೇಂದ್ರ ಸರಕಾರದ ವರ್ತನೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇರುವ ಅನುಮಾನ ಮತ್ತು ಆತಂಕದ ಮನಸ್ಥಿತಿಯನ್ನು ಉಗ್ರರು ದುರುಪಯೋಗಿಸಿಕೊಂಡು ಭಯೋತ್ಪಾದಕ ಕೃತ್ಯಗಳನ್ನು ಹೆಚ್ಚಿಸಿದ್ದಾರೆ ಎಂಬುದು ಸ್ಥಳೀಯ ರಾಜಕೀಯ ಪಕ್ಷಗಳ ಆರೋಪ.

ಮತದಾನದ ಹಕ್ಕು?
ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯ ಲೆಫ್ಟಿನೆಂಟ್ ಗವರ್ನರ್ ಆಡಳಿತ ಇದೆ. ಇಲ್ಲಿ ಚುನಾವಣೆ ನಡೆಸಿ ಸರಕಾರ ರಚಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಅದರೆ, ಇದು ಬಹಳಷ್ಟು ಟೀಕೆಗೂ ಗುರಿಯಾಗಿದೆ.
ಕಾಶ್ಮೀರದ ವಿವಿಧ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಲಾಗಿದೆ. ಕಾಶ್ಮೀರದಲ್ಲಿ ವಾಸಿಸುತ್ತಿರುವ ಸ್ಥಳೀಯರಲ್ಲದ ಜನರಿಗೆ ಮತದಾನದ ಹಕ್ಕು ಕಲ್ಪಿಸಲಾಗಿದೆ. ಇವೆಲ್ಲವೂ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ತೆಗೆದುಕೊಂಡಿರುವ ಕ್ರಮ ಎಂಬುದು ಪ್ರಮುಖ ಆಕ್ಷೇಪ.
2019ಕ್ಕೆ ಮುನ್ನ ಜಮ್ಮು ಮತ್ತು ಕಾಶ್ಮೀರದ ಖಾಯಂ ನಿವಾಸಿಗಳು ಮಾತ್ರ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು. ಯಾವ ಕಾಶ್ಮೀರೇತರರೂ ಅಲ್ಲಿ ಉದ್ಯೋಗ ಅಥವಾ ಭೂ ಮಾಲಕತ್ವದ ಹಕ್ಕು ಪಡೆಯುವಂತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಸ್ಥಳೀಯ ಸಮುದಾಯದ ಧ್ವನಿಯನ್ನು ಹತ್ತಿಕ್ಕಲು ಸರಕಾರ ಮಾಡುತ್ತಿರುವ ಪ್ರಯತ್ನ ಎಂಬ ಭಾವನೆ ಬೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಒಂದು ವರದಿ ಪ್ರಕಾರ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಪಾಕಿಸ್ತಾನದಿಂದ ಅನೇಕ ಹಿಂದೂಗಳು ಭಾರತಕ್ಕೆ ವಲಸೆ ಬಂದು ಹಲವರು ಜಮ್ಮು ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರೆಲ್ಲರಿಗೂ ಈಗ ಮತದಾನದ ಹಕ್ಕು ಕೊಡಲಾಗಿದೆ. ಹಾಗೆಯೇ, ಇಲ್ಲಿ ವಾಸಿಸುತ್ತಿರುವ ಯಾರು ಬೇಕಾದರೂ ಮತದಾರರಾಗಿ ನೊಂದಾಯಿಸುವ ಅವಕಾಶ ಇದೆ. ಜಮ್ಮು ಮತ್ತು ಕಾಶ್ಮೀರದ ಚುನಾವಣಾಧಿಕಾರಿ ಪ್ರಕಾರ ಇಲ್ಲಿ ೨೦ ಲಕ್ಷ ಹೊಸ ಮತದಾರರ ಸೇರ್ಪಡೆಯಾಗುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications