ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧ ನಾಪತ್ತೆ; ಉಗ್ರರಿಂದ ಅಪಹರಣ ಶಂಕೆ
ಶ್ರೀನಗರ, ಆಗಸ್ಟ್ 03 : ಕುಟುಂಬ ಸದಸ್ಯರ ಜೊತೆ ಬಕ್ರೀದ್ ಆಚರಣೆ ಮಾಡಲು ರಜೆ ಮೇಲೆ ತೆರಳಿದ್ದ ಯೋಧರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಪತ್ತೆಯಾಗಿದ್ದಾರೆ. ಸೇನೆಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
Recommended Video
ಶಾಕೀರ್ ಮಜೂರ್ ಎಂಬ 162 ಬೆಟಾಲಿಯನ್ ಯೋಧ ಭಾನುವಾರ ಸಂಜೆ 5ರಿಂದ ನಾಪತ್ತೆಯಾಗಿದ್ದಾರೆ. ಉಗ್ರರ ಗುಂಪು ಯೋಧನನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಹುಡುಕಾಟ ನಡೆಯುತ್ತಿದೆ.
ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿರ್ಜನ ಪ್ರದೇಶವೊಂದರಲ್ಲಿ ಯೋಧನ ಕುಟುಂಬಕ್ಕೆ ಸೇರಿದ ಕಾರು ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭಾನುವಾರ ಸಂಜೆ ಮನೆಯಿಂದ ಕಾರಿನಲ್ಲಿ ಮಜೂರ್ ಹೊರ ಹೋಗಿದ್ದರು, ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಸೇನೆ ಯೋಧನಿಗಾಗಿ ಹುಡುಕಾಟ ನಡೆಸುತ್ತಿದೆ.

ರಜೆ ಹಾಕಿದ್ದ ಯೋಧ ಕುಟುಂಬದ ಜೊತೆ ಬಕ್ರೀದ್ ಆಚರಣೆ ಮಾಡಲು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದರು. ಸಂಜೆ ಮನೆಯಿಂದ ಹೊರ ಹೋದಾಗ ಅವರನ್ನು ಅಪಹರಣ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಭಾನುವಾರ ಸಂಜೆಯಿಂದ ಹುಡುಕಾಟ ನಡೆಸಿದರೂ ಯೋಧನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಚೆಕ್ ಪೋಸ್ಟ್‌ಗಳಿಗೂ ಮಾಹಿತಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications