ಪಾಕ್ ಹಿಮ್ಮೆಟ್ಟಿಸಲು ಹೋದ ಒಂದು ಮಿಗ್ 21 ವಿಮಾನ ನಾಪತ್ತೆ
ನವದೆಹಲಿ, ಫೆಬ್ರವರಿ 27 : ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು 6 ಮಿಗ್ 21 ವಿಮಾನಗಳು ತೆರಳಿದ್ದವು. ಇವುಗಳಲ್ಲಿ 5 ವಿಮಾನಗಳು ಸುರಕ್ಷಿತವಾಗಿ ವಾಯುನೆಲೆಗೆ ವಾಪಸ್ ಆಗಿವೆ. ಇನ್ನೊಂದು ವಿಮಾನ ಇನ್ನೂ ತಲುಪಬೇಕಿದೆ.
ಬುಧವಾರ ಬೆಳಗ್ಗೆ ಶ್ರೀನಗರದ ವಾಯುನೆಲೆಯಿಂದ 6 ಮಿಗ್ 21 ವಿಮಾನಗಳನ್ನು ಗಡಿಯಲ್ಲಿ ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಲು ಕಳುಹಿಸಲಾಗಿತ್ತು. ಇವುಗಳಲ್ಲಿ ವಿಂಗ್ ಕಮಾಂಡ್ ಅಭಿನಂದನ್ ಪೈಲೆಟ್ ಆಗಿದ್ದ ಮಿಗ್ 21 ಬೈಸನ್ ಜೆಟ್ ಇನ್ನೂ ವಾಪಸ್ ಆಗಿಲ್ಲ.
ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಬುಧವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ, 'ಆಪರೇಷನ್ ಸಂದರ್ಭದಲ್ಲಿ ನಾವು ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ. ಒಬ್ಬ ಪೈಲೆಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲೆಟ್ ನಮ್ಮ ವಶದಲ್ಲಿದ್ದಾನೆ ಎಂದು ಹೇಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಹೇಳಿದ್ದಾರೆ.

'ಬುಧವಾರ ಬೆಳಗ್ಗೆ ಪಾಕಿಸ್ತಾನದ ವಿಮಾನಗಳು ನಮ್ಮನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಮುಂದಾಗಿದ್ದವು. ತಕ್ಷಣ ಪ್ರತಿಕ್ರಿಯೆ ನೀಡಿದ ನಮ್ಮ ವಿಮಾನಗಳು ಅವುಗಳನ್ನು ಹಿಮ್ಮೆಟ್ಟಿಸಿವೆ. ಈ ವೇಳೆ ಪಾಕಿಸ್ತಾನದ ಒಂದು ವಿಮಾನವನ್ನು ಹೊಡೆದುರುಳಿಸಲಾಗಿದೆ' ಎಂದು ರವೀಶ್ ಕುಮಾರ್ ತಿಳಿಸಿದರು.
ಪಾಕಿಸ್ತಾನದ ಮೇಜರ್ ಜನರಲ್ ಎ.ಗಫೂರ್ ಅವರು ಬುಧವಾರ ಬೆಳಗ್ಗೆ ಪಾಕಿಸ್ತಾನದ ಗಡಿಯೊಳಗೆ ಬಂದ ಭಾರತದ ಎರಡು ವಿಮಾನಗಳನ್ನು ಹೊಡೆದುರುಳಿಸಿ, ಪೈಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಭಾರತ ಪಾಕಿಸ್ತಾನದ ಹೇಳಿಕೆಯನ್ನು ತಳ್ಳಿ ಹಾಕಿತ್ತು. ಭಾರತದ ಯಾವುದೇ ವಿಮಾನವನ್ನು ಹೊಡೆದುರುಳಿಸಿಲ್ಲ. ಭಾರತೀಯ ವಾಯುಪಡೆಗೆ ಯಾವುದೇ ಈ ಕಾರ್ಯಾಚರಣೆ ಸಂದರ್ಭದಲ್ಲಿ ಹಾನಿಯಾಗಿಲ್ಲ ಎಂದು ಹೇಳಿತ್ತು.
ಪಾಕಿಸ್ತಾನದ ವಿಮಾನ ಗಡಿನಿಯಂತ್ರಣ ರೇಖೆಯನ್ನು ದಾಟಿ ಬಂದಿತ್ತು. ಭಾರತೀಯ ವಾಯುಪಡೆ ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನವನ್ನು ಜಮ್ಮು ಮತ್ತು ಕಾಶ್ಮೀರದ ಲಾವ್ ಪ್ರದೇಶದಲ್ಲಿ ಹೊಡೆದುರುಳಿಸಿದೆ ಎಂದು ವಾಯುಪಡೆ ಹೇಳಿಕೆ ಬಿಡುಗಡೆ ಮಾಡಿತ್ತು.












Click it and Unblock the Notifications