Year Ender 2024: ಭಾರತ ತಂಡಕ್ಕೆ ಆಘಾತ ನೀಡಿದ ಸೋಲುಗಳಿವು
2024ರ ವರ್ಷ ಮುಗಿಯುತ್ತಾ ಬಂದಿದ್ದು, ಭಾರತ ಕ್ರಿಕೆಟ್ ಅಭಿಮಾನಿಗಳು ಒಮ್ಮೆ ತಿರುಗಿ ನೋಡಿದರೆ ಈ ವರ್ಷ ಭಾರತ ತಂಡದ ಸೋಲು ಗೆಲುವಿನ ಸಿಹಿ ಕಹಿ ಎರಡೂ ಸಿಗುತ್ತದೆ. ಟಿ20 ವಿಶ್ವಕಪ್ ಗೆದ್ದಿದ್ದು ಈ ವರ್ಷದ ಭಾರತ ತಂಡದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಸಿಹಿ ಮಾತ್ರವಲ್ಲ ಭಾರತಕ್ಕೆ ಈ ವರ್ಷ ಸೋಲಿನ ಕಹಿ ಕೂಡ ಸಿಕ್ಕಿದೆ. ಅದು ಕೂಡ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿನ ಆಘಾತ ಸಿಕ್ಕಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತಿದ್ದು ಈ ವರ್ಷದ ಅವಮಾನಕರ ಸೋಲುಗಳಲ್ಲಿ ಒಂದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಫೇವರಿಟ್ ತಂಡವಾಗಿದ್ದ ಭಾರತ ಈ ಸರಣಿ ಸೋಲಿನ ಬಳಿಕ ಫೈನಲ್ ಲೆಕ್ಕಚಾರವೇ ಬದಲಾಗಿದೆ. ಭಾರತದ ಬ್ಯಾಟಿಂಗ್ ಇಡೀ ವರ್ಷ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದ್ದರೂ ತಂಡವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ಮುಖ್ಯ ಕಾರಣ.

ಟಿ20 ವಿಶ್ವಕಪ್ ಗೆದ್ದು ಬಂದು ಬೀಗುತ್ತಿದ್ದ ಭಾರತಕ್ಕೆ ಮೊದಲು ಆಘಾತ ನೀಡಿದ್ದು ಶ್ರೀಲಂಕಾ, ಏಕದಿನ ಸರಣಿಯಲ್ಲಿ ಭಾರತ ಸೋತು ಶರಣಾದರೆ, ಟಿ20 ಸರಣಿಯನ್ನು ಗೆದ್ದು ಸಮಾಧಾನಪಟ್ಟುಕೊಂಡಿತು. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಸೋತು ಭಾರತಕ್ಕೆ ಬಂದ ನ್ಯೂಜಿಲೆಂಡ್ ಇತಿಹಾಸವನ್ನೇ ಸೃಷ್ಟಿಸಿತು. 2024ರ ವರ್ಷದಲ್ಲಿ ಭಾರತ ತಂಡಕ್ಕೆ ಆಘಾತ ಕೊಟ್ಟ ಸೋಲುಗಳು ಯಾವುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಟೆಸ್ಟ್ ಸರಣಿ ವೈಟ್‌ವಾಶ್ ಮಾಡಿದ ನ್ಯೂಜಿಲೆಂಡ್
ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 46 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿತು. ಇದು ತವರಿನಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲಿಸಿದ ಅತಿ ಕಡಿಮೆ ಮೊತ್ತವಾಗಿದೆ. ವೇಗಿಗಳ ದಾಳಿಗೆ ಭಾರತದ ಬಳಿ ಉತ್ತರವೇ ಇಲ್ಲದಂತಾಗಿತ್ತು. 8 ವಿಕೆಟ್‌ಗಳಿಂದ ಮೊದಲ ಪಂದ್ಯ ಗೆದ್ದ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿತು.
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯ ಎರಡನೇ ಟೆಸ್ಟ್‌ನಲ್ಲಿ ಭಾರತದ ಬ್ಯಾಟರ್ ಗಳು ಮತ್ತೆ ಕೈಕೊಟ್ಟರು ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಭಾರತ ತಡಕಾಡಿದರೆ ನ್ಯೂಜಿಲೆಂಡ್ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿತು. ಮಿಚೆಲ್ ಸ್ಯಾಂಟ್ನರ್ ಈ ಟೆಸ್ಟ್‌ನಲ್ಲಿ 13 ವಿಕೆಟ್ ಪಡೆದು ಭಾರತಕ್ಕೆ ಮಾರಕವಾದರು. 113 ರನ್‌ಗಳ ಬೃಹತ್ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿ ಗೆದ್ದಿತ್ತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲೂ ಉತ್ತಮ ಪ್ರದರ್ಶನ ಮುಂದುವರೆಸಿದ ನ್ಯೂಜಿಲೆಂಡ್ 25 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಭಾರತದ ವಿರುದ್ಧ ಮೊದಲ ಬಾರಿಗೆ 3-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು.
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು
ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಕೂಡ ಭಾರತಕ್ಕೆ ಸೋಲು ಎದುರಾಯಿತು. 1997ರ ನಂತರ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಭಾರತ ದ್ವಿಪಕ್ಷಿಯ ಸರಣಿ ಸೋತ ಕೆಟ್ಟ ದಾಖಲೆ ಮಾಡಿತು. ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಗೆಲ್ಲುವ ಅವಕಾಶವನ್ನು ಭಾರತ ತಂಡವೇ ಕೈಚೆಲ್ಲಿದ್ದು ದುಬಾರಿಯಾಗಿತ್ತು. ಬಳಿಕ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದುಕೊಂಡ ಶ್ರೀಲಂಕಾ ಇತಿಹಾಸ ನಿರ್ಮಿಸಿತು.
ಸದ್ಯ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಲೆಕ್ಕಾಚಾರದಲ್ಲಿದ್ದು ಅದಕ್ಕಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ. ಡಿಸೆಂಬರ್ 26ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಆರಂಭವಾಗಲಿದ್ದು ಅಭ್ಯಾಸ ಆರಂಭಿಸಿದೆ.












Click it and Unblock the Notifications