ಅಹಂಕಾರಿ ಆಸ್ಟ್ರೇಲಿಯಾ ಬೌಲಿಂಗ್ ಪಡೆಯನ್ನ ಧೂಳ್, ಧೂಳ್ ಮಾಡಿದ ಜೈಸ್ವಾಲ್ & ಪಂತ್ ಜೋಡಿ!
ಆಸ್ಟ್ರೇಲಿಯಾ ತಂಡದ ಅಹಂಕಾರ ಅಡಗಿ ಹೋಗುತ್ತಿದೆ, ಭಾರತೀಯ ತಂಡದ ಆಟಗಾರರ ವಿರುದ್ಧ ಮೈಂಡ್ ಗೇಮ್ ಆಡಲು ಹೋಗಿ ಸ್ವತಃ ಆಸ್ಟ್ರೇಲಿಯಾ ಆಟಗಾರರು ಬುಡಕ್ಕೆ ಬೆಂಕಿ ಇಟ್ಟುಕೊಂಡು ಒದ್ದಾಡುತ್ತಿದ್ದಾರೆ. 'ಬಾರ್ಡರ್ & ಗವಾಸ್ಕರ್' ಟ್ರೋಫಿಯ 4ನೇ ಟೆಸ್ಟ್ ಮ್ಯಾಚ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ ಈ ಮ್ಯಾಚ್ ಗೆಲ್ಲುತ್ತದೆ ಎನ್ನಲಾಗಿತ್ತು, ಆ ಬಳಿಕ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ನೋಡ ನೋಡುತ್ತಿದ್ದಂತೆ ಭಾರತ ಮ್ಯಾಚ್ ಕೈಚೆಲ್ಲಿತ್ತು, ಹೀಗಿದ್ದಾಗ ಮತ್ತೆ ಆಸ್ಟ್ರೇಲಿಯಾಗೆ ಆಘಾತ ನೀಡಿದೆ ಭಾರತ!
ಆಸ್ಟ್ರೇಲಿಯಾದಲ್ಲಿ ಈಗ ಮಧ್ಯಾಹ್ನ 3:33 ಗಂಟೆ ಆಗಿದೆ, ಭಾರತ & ಆಸ್ಟ್ರೇಲಿಯಾ ನಡುವೆ ಸಾಕಷ್ಟು ಸಮಯದ ವ್ಯತ್ಯಾಸ ಇದ್ದು ಬೆಳಗ್ಗೆಯೇ ಅಲ್ಲಿ ಮ್ಯಾಚ್ ಶುರುವಾಗಿತ್ತು. ಆರಂಭ ಆದ 5ನೇ ದಿನ ಆಸ್ಟ್ರೇಲಿಯಾಗೆ ಬಹುಬೇಗ ಶಾಕ್ ಕೊಡ್ತು. 'ಬಾರ್ಡರ್ & ಗವಾಸ್ಕರ್' ಟ್ರೋಫಿ 4ನೇ ಟೆಸ್ಟ್ ಪಂದ್ಯದ 5ನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಗಿಸಿದ ಆಸ್ಟ್ರೇಲಿಯಾ ತಂಡವು ಭಾರತಕ್ಕೆ 340 ರನ್‌ಗಳ ಟಾರ್ಗೆಟ್ ನೀಡಿತ್ತು. ಆರಂಭದಲ್ಲಿ ಮತ್ತೆ ಮಕಾಡೆ ಮಲಗಿದ್ದ ಭಾರತ ಬ್ಯಾಟಿಂಗ್ ಪಡೆ ಕೇವಲ 33 ರನ್‌ಗೆ 3 ವಿಕೆಟ್ ಕಳೆದುಕೊಂಡು ನರಳಾಡಿತ್ತು!

ಜೈಸ್ವಾಲ್ & ಪಂತ್ ಭರ್ಜರಿ ಬ್ಯಾಟಿಂಗ್!
ಭಾರತದ ಆರಂಭಿಕ ಆಟಗಾರರು ಕೈಕೊಟ್ಟು ಹೋದರು, ಭಾರತ ತಂಡದ ಕ್ಯಾಪ್ಟನ್ ಆದ ರೋಹಿತ್ ಶರ್ಮಾ ಕೇವಲ 9 ರನ್‌ಗೆ ಗೂಡು ಸೇರಿದರು & ಕೆ.ಎಲ್. ರಾಹುಲ್ ಡಕ್ ಔಟ್ ಆಗಿ ಹೋಗಿಬಂದ ಪುಟ್ಟ ಎಂಬಂತೆ ಆಟ ಆಡಿದರು. ಇಷ್ಟೆಲ್ಲದರ ನಡುವೆ ಅತಿಹೆಚ್ಚು ನೋವು ನೀಡಿದ್ದು ವಿರಾಟ್ ಕೊಹ್ಲಿ ಅವರ ಆಟ, ವಿರಾಟ್ ಕೊಹ್ಲಿ ಅವರು ಕೇವಲ 5 ರನ್‌ಗೆ ಔಟ್ ಆಗಿಬಿಟ್ಟರು.
ಮಿಚೆಲ್ ಸ್ಟಾರ್ಕ್ ಅವರ ಔಟ್ ಸ್ವಿಂಗ್ ಬಾಲ್ ಮುಟ್ಟಲು ಹೋಗಿ ಎಡ್ಜ್ ಆದ ಕಾರಣ ಸ್ಲಿಪ್ ಅಲ್ಲಿ ಕ್ಯಾಚ್ ಕೊಟ್ಟು ವಿರಾಟ್ ಕೊಹ್ಲಿ ಗೂಡು ಸೇರಿದರು. ಹೀಗಿದ್ದಾಗ ಶುರು ಆಗಿದ್ದು ನೋಡಿ ಜೈಸ್ವಾಲ್ & ಪಂತ್ ಅಬ್ಬರ. ಒಂದು ಕಡೆ ಯಶಸ್ವಿ ಜೈಸ್ವಾಲ್ 70 ರನ್ ಬಾರಿಸಿ ಈಗಲೂ ಆಟ ಆಡುತ್ತಿದ್ದರೆ, ಇನ್ನೊಂದು ಕಡೆ ರಿಷಬ್ ಪಂತ್ ಕೂಡ ಅಬ್ಬರಿಸುತ್ತಾ 30 ರನ್ ಗಳಿಸಿ ಜೈಸ್ವಾಲ್‌ಗೆ ಸಾಥ್ ನೀಡಿದ್ದಾರೆ.












Click it and Unblock the Notifications