WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; ಭಾರತದ ಲೆಕ್ಕಾಚಾರ ಏನು?
ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಸೋಲಿನ ಸುಳಿಯಲ್ಲಿದ್ದ ಭಾರತ ಮಳೆಯ ಕಾರಣದಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬ್ರಿಸ್ಬೇನ್ ಟೆಸ್ಟ್ ಗೆದ್ದಿದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು, ಸೋತಿದ್ದರೆ ಭಾರತದ ಫೈನಲ್ ಹಾದಿ ಇನ್ನಷ್ಟು ಕಷ್ಟವಾಗುತ್ತಿತ್ತು, ಆದರೆ ಡ್ರಾ ಮಾಡಿಕೊಂಡಿದ್ದು, ಅಂಕಪಟ್ಟಿಯಲ್ಲಿ ಏನೂ ಬದಲಾವಣೆಯಾಗದೆ ಉಳಿದಿದೆ.
ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಕೊನೆಯ ದಿನದ ಪೂರ್ತಿ ಆಟ ನಡೆದಿದ್ದರೆ ಫಲಿತಾಂಶ ಬರುವ ನಿರೀಕ್ಷೆ ಇತ್ತಾದರೂ, ಪದೇ ಪದೇ ಮಳೆ ಅಡ್ಡಿಪಡಿಸಿದ್ದು, ಬೆಳಕಿನ ಸಮಸ್ಯೆಯಿಂದಾಗಿ ಪಂದ್ಯವನ್ನು ಮೊಟಕುಗೊಳಿಸಲಾಯಿತು. ಎರಡೂ ತಂಡದ ನಾಯಕರ ಒಪ್ಪಿಗೆ ಮೇರೆಗೆ ಡ್ರಾ ಎಂದು ಫಲಿತಾಂಶವನ್ನು ಘೋಷಣೆ ಮಾಡಲಾಯಿತು.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಲ್ಲಿದ್ದ ಭಾರತ ಬಳಿಕ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಸೋತು ಎರಡನೇ ಸ್ಥಾನಕ್ಕೆ ಕುಸಿದಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರಿತ್ತು. ಇದರ ನಡುವೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬರುವ ಮೂಲಕ ಭಾರತ ಎರಡನೇ ಸ್ಥಾನಕ್ಕೆ ಬಂದಿತ್ತು. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಸೋತ ಭಾರತ ಮೂರನೇ ಸ್ಥಾನಕ್ಕೆ ಕುಸಿದರೆ ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಏರಿತು.
ಗೆಲುವೊಂದೆ 'ಫೈನಲ್' ಮಂತ್ರ
2023-2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಭಾರತ ಇನ್ನೆರಡು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಲಿದೆ. ಭಾರತ ಮುಂದಿನ ಎರಡೂ ಪಂದ್ಯ ಗೆದ್ದರೆ ಯಾವ ಲೆಕ್ಕಾಚಾರವೂ ಇಲ್ಲದೆ ಫೈನಲ್‌ಗೆ ಪ್ರವೇಶಿಸಲಿದೆ. ಒಂದು ವೇಳೆ ಒಂದು ಪಂದ್ಯ ಸೋತರೂ, ಆಸ್ಟ್ರೇಲಿಯಾ-ಶ್ರೀಲಂಕಾ ನಡುವೆ ನಡೆಯಲಿರುವ ಟೆಸ್ಟ್ ಸರಣಿಯ ಫಲಿತಾಂಶ ಭಾರತದ ಫೈನಲ್ ಹಾದಿಯನ್ನು ನಿರ್ಧರಿಸಲಿದೆ.
ಭಾರತ 2-1 ಅಂತರದಲ್ಲಿ ಸರಣಿ ಗೆದ್ದರೆ, ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ 1-0 ಅಂತರದಲ್ಲಿ ಗೆದ್ದರೆ ಮಾತ್ರ ಭಾರತಕ್ಕೆ ಫೈನಲ್ ತಲುಪುವ ಅವಕಾಶವಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಏನಾದರೂ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯನ್ನು ಸೋತರೂ ಭಾರತಕ್ಕೆ ಅವಕಾಶ ಸಿಗಲಿದೆ. ಭಾರತ ಆಸ್ಟ್ರೇಲಿಯಾ ನಡುವಿನ ಸರಣಿ 2-2ರಲ್ಲಿ ಸಮಬಲವಾದರೆ, ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ 2 ಟೆಸಟ್ ಪಂದ್ಯ ಗೆದ್ದರೆ ಮಾತ್ರ ಭಾರತಕ್ಕೆ ಫೈನಲ್ ಟಿಕೆಟ್ ಸಿಗಲಿದೆ.
ಯಾರ ಮೇಲೂ ನಾವು ಅವಲಂಬನೆಯಾಗಲ್ಲ ಎನ್ನುವ ಉದ್ದೇಶ ಭಾರತಕ್ಕಿದ್ದರೆ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲು ರಣತಂತ್ರ ರೂಪಿಸಬೇಕಾಗುತ್ತದೆ. 3-1 ಅಂತರದಲ್ಲಿ ಸರಣಿ ಗೆದ್ದರೆ ಭಾರತ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಈಗಾಗಲೇ ಸತತವಾಗಿ ಎರಡು ಬಾರಿ ಫೈನಲ್ ಪ್ರವೇಶಿಸಿರುವ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು, ಈ ಬಾರಿ ಅದನ್ನು ನೀಗಿಸಿಕೊಳ್ಳುವ ಉದ್ದೇಶದಲ್ಲಿದೆ.












Click it and Unblock the Notifications