WTC Final 2023: ಸೋಲಿನ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಆಘಾತ!
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ನಿಧಾನಗತಿಯ ಓವರ್ ದರಗಳಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 209 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿದರೆ, ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ.
ಆಸ್ಟ್ರೇಲಿಯಾ ತಂಡ ತಮ್ಮ ಪಂದ್ಯದ ಹಣದಲ್ಲಿ 80 ಪ್ರತಿಶತದಷ್ಟು ಕಳೆದುಕೊಳ್ಳಲಿದೆ. ಇನ್ನು ನಿಧಾನಗತಿಯ ಓವರ್ ರೇಟ್‌ನಿಂದ ಭಾರತ ತಂಡ ಸಂಪೂರ್ಣ ಪಂದ್ಯದ ಶುಲ್ಕವನ್ನು ಕಳೆದುಕೊಳ್ಳಲಿದೆ. ಮೊದಲೇ ಸೋಲೊನ ಬೇಸರದಲ್ಲಿರುವ ಭಾರತ ತಂಡಕ್ಕೆ ಇದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.

ಆಸ್ಟ್ರೇಲಿಯಾ ತಂಡ ಗುರಿಗಿಂತ ನಾಲ್ಕು ಓವರ್ ಕೊರತೆ ಇದ್ದರೆ, ಭಾರತ ತಂಡ ಐದು ಓವರ್‌ಗಳ ಕೊರತೆಯಿದೆ ಎಂದು ನಿರ್ಧರಿಸಲಾಯಿತು. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರಲ್ಲಿ ಹೇಳಿರುವಂತೆ, ಅನುಮತಿಸಲಾದ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲರಾದ ಅವರ ತಂಡಕ್ಕೆ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಶೇಕಡ 20 ರಷ್ಟು ದಂಡ ವಿಧಿಸಲಾಗುತ್ತದೆ.
ಶುಭಮನ್ ಗಿಲ್‌ಗೆ ಬಿತ್ತು ದಂಡ
ಇನ್ನು ಭಾರತ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್‌ಗೆ ಕೂಡ ಆಟದ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಲಾಗಿದೆ. ವಿವಾದಾತ್ಮಾಕ ತೀರ್ಪಿಗೆ ಬಲಿಯಾದ ನಂತರ, ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಖಂಡಿಸಿದ್ದರು. ಇದು ನಿಯಮ 2.7 ಅನ್ನು ಉಲ್ಲಂಘಿಸಿದಂತಾಗಿದ್ದು, ಪಂದ್ಯದ ಶುಲ್ಕದ ಶೇಕಡ 15 ರಷ್ಟು ದಂಡ ವಿಧಿಸಲಾಗಿದೆ.
ಶುಭಮನ್ ಗಿಲ್ ಅವರು ಸ್ಲಿಪ್‌ನಲ್ಲಿ ನಿಂತಿದ್ದ ಕ್ಯಾಮರಾನ್ ಗ್ರೀನ್ ಅವರಿಗೆ ಕ್ಯಾಚ್ ನೀಡಿದ್ದರು. ಮೂರನೇ ಅಂಪೈರ್ ರಿಚರ್ಡ್ ಕೆಟಲ್‌ಬರೋ ಔಟ್ ಎಂದು ತೀರ್ಪು ನೀಡಿದ್ದರು. ಆದರೆ, ಚೆಂಡು ನೆಲಕ್ಕೆ ತಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು, ಗಿಲ್ ಈ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸತತ ಎರಡನೇ ಬಾರಿ ಫೈನಲ್‌ನಲ್ಲಿ ಸೋತ ಭಾರತ
ಭಾರತ ತಂಡ ಸತತವಾಗಿ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತ್ತು. 2021ರಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸೋತಿದ್ದರು, ಈ ಬಾರಿ ಕೂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಗೆದ್ದು ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರೂ, ಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಮತ್ತೆ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ.












Click it and Unblock the Notifications