ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ನ್ಯಾಟ್ ಸಿವರ್-ಬ್ರಂಟ್ ಹೊಸ ದಾಖಲೆ, ಮುಂಬೈ ವಿರುದ್ಧ ಸೋತರೂ ಸೈ ಎನಿಸಿಕೊಂಡ ಆರ್‌ಸಿಬಿ ರಿಚಾ ಘೋಷ್
WPL 2026: ಮುಂಬೈ ಇಂಡಿಯನ್ಸ್ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸುಗ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ. ಆದರೂ, ಬೆಂಗಳೂರು ಸೋತರೂ ಸಹ ರಿಚಾ ಘೋಷ್ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನಸನ್ನು ಗೆದ್ದುಬಿಟ್ಟರು.
ಆಲ್‌ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 15 ರನ್‌ಗಳ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಮುಂಬೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ. ಇನ್ನೂ ನ್ಯಾಟ್ ಸಿವರ್-ಬ್ರಂಟ್ ಅವರ ಸಿಡಿಸಿದ ಶತಕ ಡಬ್ಲ್ಯೂಪಿಎಲ್ ಇತಿಹಾಸದದಲ್ಲೇ ಮೊದಲನೇಯದ್ದಾಗಿದೆ.

ಆರ್‌ಸಿಬಿ ಕೇವಲ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ರಿಚಾ ಘೋಷ್ ಹಾಗೂ ನಾಡಿನ್ ಡಿ ಕ್ಲರ್ಕ್ ಜೋಡಿ 36 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟವಾಡಿ ಸ್ವಲ್ಪ ಮಟ್ಟಿಗೆ ಚೇತರಿಕೆ ತಂದರು. ಡಿ ಕ್ಲರ್ಕ್ 20 ಎಸೆತಗಳಲ್ಲಿ 28 ರನ್‌ಗಳಿಸಿದರೆ, ಅರುಂಧತಿ ರೆಡ್ಡಿ 14 ರನ್ ಗಳಿಸಿ ವಿಕಟ್ ಒಪ್ಪಿಸಿದರು. 19ನೇ ಓವರ್‌ನಲ್ಲಿ ರಿಚಾ ಘೋಷ್ ಮೂರು ಸತತ ಸಿಕ್ಸ್‌ಗಳನ್ನು ಸಿಡಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತೆಗೆದುಕೊಂಡು ಹೋದರು. ಅದೇ ಓವರ್‌ನಲ್ಲಿ ಶ್ರೇಯಾಂಕ ಪಾಟೀಲ್ ಎರಡು ಬೌಂಡರಿಗಳನ್ನು ಬಾರಿಸಿದ ಪರಿಣಾಮ 27 ರನ್ ಬಂದವು.
ಕೊನೆಯ ಓವರ್‌ನಲ್ಲಿ ಅಮೆಲಿಯಾ ಕೆರ್ ಬೌಲಿಂಗ್‌ನಲ್ಲಿ ರಿಚಾ ಘೋಷ್ ಎರಡು ಸಿಕ್ಸ್ ಹಾಗೂ ಒಂದು ಬೌಂಡರಿ ಹೊಡೆದು ಅಚ್ಚರಿ ಮೂಡಿಸಿದರೂ, ಅಂತಿಮ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ರಿಚಾ ಘೋಷ್ ಮತ್ತು ಶ್ರೇಯಾಂಕ ಪಾಟೀಲ್ 18 ಎಸೆತಗಳಲ್ಲಿ 55 ರನ್‌ಗಳ ಜೊತೆಯಾಟವಾಡಿ ತಂಡದ ನೆಟ್ ರನ್‌ರೇಟ್ ಉಳಿಸಿಕೊಳ್ಳಲು ಸಹಾಯ ಮಾಡಿದರು.
ಮುಂಬೈ ಬೌಲರ್‌ಗಳ ಅಬ್ಬರ: ರಿಚಾ ಘೋಷ್ 50 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 90 ರನ್ ಸಿಡಿಸಿ ಅಬ್ಬರಿಸಿದರೆ, ಶ್ರೇಯಾಂಕ ಪಾಟೀಲ್ 5 ಎಸೆತಗಳಲ್ಲಿ 12 ರನ್‌ಗಳೊಂದಿಗೆ ಔಟಾಗದೆ ಉಳಿದರು. ಮುಂಬೈ ಪರ ಹೇಲಿ ಮ್ಯಾಥ್ಯೂಸ್ ಮೂರು ವಿಕೆಟ್ ಪಡೆದರೆ, ಶಬ್ನಿಮ್ ಇಸ್ಮಾಯಿಲ್ ಹಾಗೂ ಅಮೆಲಿಯಾ ಕೆರ್ ತಲಾ ಎರಡು ವಿಕೆಟ್ ಕಬಳಿಸಿದರು.
ವಿಶೇಷ ದಾಖಲೆ ಮಾಡಿದ ಬ್ರಂಟ್: ಇನ್ನೂ ಈ ಪಂದ್ಯದಲ್ಲಿ ವಿಶೇಷ ದಾಖಲೆ ಕೂಡ ನಿರ್ಮಾಣವಾಯಿತು. ಇಂಗ್ಲೆಂಡ್ ತಂಡದ ನಾಯಕಿ ಹಾಗೂ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಮೊದಲ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾದರು. ಈವರೆಗೂ ಕೂಡ ಡಬ್ಲ್ಯೂಪಿಎಲ್‌ನಲ್ಲಿ ಈ ಸಾಧಾನೆ ಯಾರೂ ಮಾಡಿರಲಿಲ್ಲ. ಇದೇ ಮೊದಲಾಗಿದೆ.
ಆರ್‌ಸಿಬಿ ವಿರುದ್ಧ ಸಿವರ್-ಬ್ರಂಟ್ 57 ಎಸೆತಗಳಲ್ಲಿ ಅಜೇಯ 100 ರನ್ (16 ಬೌಂಡರಿ, 1 ಸಿಕ್ಸ್) ಕಲೆಹಾಕಿದರು. ಮೂರನೇ ಓವರ್‌ನಲ್ಲಿ ಕ್ರೀಸ್‌ಗಿಳಿದ ಅವರು ಕೊನೆಯ ಓವರ್‌ನಲ್ಲಿ ಶತಕ ಪೂರ್ಣಗೊಳಿಸಿದರು. 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಿವರ್-ಬ್ರಂಟ್ ನಂತರ ಕೇವಲ 25 ಎಸೆತಗಳಲ್ಲಿ ಇನ್ನೊಂದು 50 ರನ್ ಸೇರಿಸಿದರು.
ಎರಡನೇ ವಿಕೆಟ್‌ಗೆ ಹೇಲಿ ಮ್ಯಾಥ್ಯೂಸ್ ಜೊತೆ 131 ರನ್‌ಗಳ ಭರ್ಜರಿ ಜೊತೆಯಾಟವಾಡಿದ ಬ್ರಂಟ್, ನಾಲ್ಕನೇ ವಿಕೆಟ್‌ಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆ 42 ರನ್ ಸೇರಿಸಿದರು. ಹೇಲಿ ಮ್ಯಾಥ್ಯೂಸ್ 39 ಎಸೆತಗಳಲ್ಲಿ 56 ರನ್ ಗಳಿಸಿದರೆ, ಹರ್ಮನ್‌ಪ್ರೀತ್ ಕೌರ್ 12 ಎಸೆತಗಳಲ್ಲಿ 20 ರನ್‌ಗಳಿಸಿ ಔಟಾದರು. ಸಿವರ್-ಬ್ರಂಟ್ ಅವರ ಈ ಇನಿಂಗ್ಸ್ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿಯಿತು. ಆರ್‌ಸಿಬಿ ಪರ ರಿಚಾ ಘೋಷ್ ಇನ್ನೂ 90 ರನ್ ಸಿಡಿಸಿ ಔಟಾದರು, ಅವರು ಇನ್ನೂ 10 ರನ್‌ಗಳನ್ನಯ ಬಾರಿಸಿದ್ರೆ, ಇದು ಕೂಡ ಹೊಸ ದಾಖಲೆ ಆಗುತ್ತಿತ್ತು.












Click it and Unblock the Notifications