ವಿಂಬಲ್ಡನ್ 2022: ಫೈನಲ್ ತಲುಪಿ ದಾಖಲೆ ಬರೆದ ಎಲೆನಾ - ಜಬೇರ್
ಲಂಡನ್, ಜುಲೈ 07: ಈ ಬಾರಿ ವಿಂಬಲ್ಡನ್ ಮಹಿಳೆಯರ ಕಿರೀಟ ಯಾರು ಧರಿಸಬಹುದು ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗುತ್ತಿದೆ. ವಿಂಬಲ್ಡನ್ ಕಿರೀಟ ಧರಿಸುವ ಕನಸು ಕಂಡಿದ್ದ ಸಿಮೋನಾ ಹಲೆಪ್ ಕನಸು ಇಂದು ಭಗ್ನಗೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಎಲೆನಾ ರಿಬಾಕಿನಾ 6-3, 6-3 ನೇರ ಸೆಟ್ ಗಳಲ್ಲಿ ಸಿಮೋನಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ವಿಂಬಲ್ಡನ್ ಫೈನಲ್ಸ್ ತಲುಪಿದ ಸಾಧನೆ ಮಾಡಿದ್ದಾರೆ.
ರಷ್ಯಾ- ಉಕ್ರೇನ್ ನಡುವಿನ ಉದ್ವಿಗ್ನ ವಾತಾವರಣದ ನಡುವೆ ರಷ್ಯಾದಲ್ಲಿ ಜನಿಸಿದ ಕಜಕಸ್ತಾನದ ಎಲೆನಾ ರಬಕಿನಾ ಫೈನಲ್ ತಲುಪಿರುವುದು ವಿಶೇಷವಾಗಿದೆ. 100 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಸೆಂಟ್ರಲ್ ಕೋರ್ಟ್ ಅಂಗಳಲ್ಲಿ ಚಾಂಪಿಯನ್ ಆಟಗಾರ್ತಿ ಸಿಮೋನಾ ವಿರುದ್ಧ ಆರಂಭದಿಂದಲೇ ಎಲೆನಾ ಮೇಲುಗೈ ಸಾಧಿಸಿದರು.
"It's time to enjoy and really have fun on court"
— Wimbledon (@Wimbledon) July 7, 2022
Elena Rybakina is excited to face @Ons_Jabeur in a Wimbledon final#Wimbledon | #CentreCourt100 pic.twitter.com/J0o9RlShFJ
ಈ ವರ್ಷದ ವಿಂಬಲ್ಡನ್ ನಲ್ಲಿ ಯಾವುದೇ ಸೆಟ್ ಬಿಟ್ಟು ಕೊಡದೆ ಸೆಮಿಫೈನಲ್ ಹಂತ ತಲುಪಿದ್ದ ಸಿಮೋನಾ ಆಘಾತ ಎದುರಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಅಮಂದಾ ಅನಿಸಿಮೋವಾ ವಿರುದ್ಧ 6-2, 6-4 ಅಂತರದಲ್ಲಿ ಹಲೆಪ್ ಗೆಲುವು ಸಾಧಿಸಿದ್ದರು. ಸೆಮೀಸ್ ನಲ್ಲಿ ಎಲೆನಾ ವಿರುದ್ಧ ಜಯಭೇರಿ ಬಾರಿಸುವ ಉತ್ಸಾಹದಲ್ಲಿದ್ದರು.

ಆದರೆ, 2019ರ ಚಾಂಪಿಯನ್ ಹಲೆಪ್ ವಿರುದ್ಧ ರಿಬಾಕಿನಾ ಉತ್ತಮ ಆಟ ಪ್ರದರ್ಶಿಸಿ ಅರ್ಹ ಜಯದಾಖಲಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಜ್ಲಾತೋಮ್ಜಾನೊವಿಕ್ ವಿರುದ್ಧ 4-6, 6-2, 6-3ರಲ್ಲಿ ಜಯ ದಾಖಲಿಸಿ ಸೆಮೀಸ್ ತಲುಪಿದ ಮೊದಲ ಕಜಕಸ್ತಾನದ ಆಟಗಾರ್ತಿ ಎನಿಸಿಕೊಂಡಿದ್ದರು.
ಇನ್ನೊಂದೆಡೆ ಚೆಕ್ ಗಣರಾಜ್ಯದ ಮೇರಿ ಬೌಜ್ಕೋವಾ ವಿರುದ್ಧ 6-3,1-6,1-6ರಲ್ಲಿ ಟುನೇಶಿಯಾದ ಆನ್ಸ್ ಜಬೇರ್ ಜಯ ದಾಖಲಿಸಿ ಸೆಮಿಫೈನಲ್ ತಲುಪಿದ್ದರು. ಸೆಮಿಫೈನಲ್ ನಲ್ಲಿ ವಿಶ್ವದ ನಂ.2 ಆಟಗಾರ್ತಿ ಜಬೇರ್ ಅವರು ಜರ್ಮನಿಯ ತಜಾನಾ ಮರಿಯಾ ವಿರುದ್ಧ 6-2, 6-3, 1-6ರಲ್ಲಿ ಜಯ ದಾಖಲಿಸಿ ಫೈನಲ್ ತಲುಪಿದರು. ಈ ಮೂಲಕ ಫೈನಲ್ ತಲುಪಿದ ಮೊದಲ ಅರಬ್- ಆಫ್ರಿಕನ್ ಮೂಲದ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಜುಲೈ 9ರಂದು ಮಹಿಳೆಯರ ಸಿಂಗಲ್ಸ್ ಫೈನಲ್ಸ್ ಪಂದ್ಯ ನಿಗದಿಯಾಗಿದೆ. ಆಲ್ ಇಂಗ್ಲೆಂಡ್ ಕ್ಲಬ್ ತೆಗೆದುಕೊಂಡ ನಿರ್ಣಯದಂತೆ ರಷ್ಯಾದ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು, ಯುದ್ಧದ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಇನ್ನು ವಿಶ್ವ ನಂ.2 ಸೀಡ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಗಾಯಗೊಂಡಿದ್ದು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಜೂನ್ 27, ದಿಂದ ಅಧಿಕೃತವಾಗಿ ಪಂದ್ಯಾವಳಿಗಳು ಆರಂಭಗೊಂಡಿದ್ದು, ಸುಮಾರು 128 ಪುರುಷ ಹಾಗೂ 128 ಮಹಿಳಾ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
ವಿಂಬಲ್ಡನ್ 2022 ನೋಡುವುದು ಎಲ್ಲಿ? ಹೇಗೆ?
ಟಿವಿ: ಸ್ಟಾರ್ ಸ್ಪೋರ್ಟ್ಸ್ ಸಮೂಹ ಜಾಲದಲ್ಲಿ ನೇರ ಪ್ರಸಾರವಾಗಲಿದೆ.
ಆನ್ ಲೈನ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ ಸ್ಟಾರ್
ಫೈನಲ್ ಪಂದ್ಯ: ವಿಂಬಲ್ಡನ್ 2022ರ ಫೈನಲ್ ಪಂದ್ಯ ಜುಲೈ 9(ಮಹಿಳೆ) ಹಾಗೂ ಜುಲೈ 10(ಪುರುಷ)ರಂದು ನಡೆಯಲಿದೆ.
ವಿಂಬಲ್ಡನ್ ಬಹುಮಾನದ ಮೊತ್ತ: ಈ ಬಾರಿ ಪುರುಷ/ ಮಹಿಳಾ ಸಿಂಗಲ್ಸ್ ಗೆಲ್ಲುವ ಟೆನಿಸ್ ಪಟುವಿಗೆ 2 ಮಿಲಿಯನ್ ಪೌಂಡ್ ಪ್ರಶಸ್ತಿ ಮೊತ್ತ, ಫಲಕ ಸಿಗಲಿದೆ.












Click it and Unblock the Notifications