ನೋವಿನಿಂದಲೇ 26ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಆಟಗಾರ; ಕಾರಣವೇನು?
ಆಸ್ಟ್ರೇಲಿಯಾದ ಪ್ರತಿಭಾವಂತ ಯುವ ಆಟಗಾರ ನೋವಿನಿಂದಲೇ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತದ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದ ವಿಲ್ ಪುಕೊವ್ಸ್ಕಿ ಇದೀಗ ಅನಿವಾರ್ಯವಾಗಿ ಕ್ರಿಕೆಟ್‌ನಿಂದ ನಿವೃತ್ತಿಯಾಗಬೇಕಿದೆ. ಅವರು ಗಾಯಗೊಂಡಿದ್ದೇ ಇದಕ್ಕೆ ಕಾರಣವಾಗಿದ್ದು, ವೈದ್ಯರ ಸಲಹೆ ಮೇರೆಗೆ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಇಂದು ವಿಲ್ ಪುಕೊವ್ಸ್ಕಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.
ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, 26 ವರ್ಷ ವಯಸ್ಸಿನ ವಿಲ್ ಪುಕೊವ್ಸ್ಕಿ ತಲೆಗೆ ಗಾಯಗೊಂಡ (ಕನ್ಕ್ಯುಶನ್) ಕಾರಣ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ವೈದ್ಯಕೀಯ ತಜ್ಞರ ಶಿಫಾರಸುಗಳನ್ನು ಅನುಸರಿಸಿ, ಪುಕೊವ್ಸ್ಕಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಗಾಯಗೊಂಡಿದ್ದರೆ, ಆದರೆ ಮಾರ್ಚ್‌ನಲ್ಲಿ ಅವರು ಗಾಯಗೊಂಡಾಗ ಅದು ಮೈದಾನದಿಂದಲೇ ಹೊರನಡೆಯಬೇಕಾಯಿತು.

ನೀವಿನ್ನು ಕ್ರಿಕೆಟ್ ಆಡಿದರೆ ಜೀವಕ್ಕೆ ಆಪತ್ತು ಬರಬಹುದು ಎಂದು ತಜ್ಞರು ಹೇಳಿದ ನಂತರ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ನೈನ್ ನ್ಯೂಸ್‌ನ ಕ್ರೀಡಾ ಪತ್ರಕರ್ತರೊಬ್ಬರ ಹೇಳಿಕೆ ಪ್ರಕಾರ, ತಜ್ಞರ ಸ್ವತಂತ್ರ ಸಮಿತಿಯು ಮೂರು ತಿಂಗಳ ಹಿಂದೆ ಪುಕೊವ್ಸ್ಕಿ ಅವರಿಗೆ ನಿವೃತ್ತಿ ಹೊಂದುವಂತೆ ಶಿಫಾರಸು ಮಾಡಿದೆ. ಆದರೆ ವಿಕ್ಟೋರಿಯಾ ತಂಡದ ಜೊತೆ ಒಪ್ಪಂದ ಇರುವ ಕಾರಣ, ಅದು ಮುಗಿಯುವವರೆಗೆ ಔಪಚಾರಿಕವಾಗಿ ತಂಡದಲ್ಲಿರುತ್ತಾರೆ ಎಂದಿದ್ದಾರೆ.
ಪುಕೊವ್ಸ್ಕಿ ನಿವೃತ್ತಿಯಾಗುತ್ತಿರುವುದು ತಂಡದ ಆಟಗಾರರಿಗೆ ಅಚ್ಚರಿ ವಿಚಾವಾಗಿ ಉಳಿದಿಲ್ಲ, ಕಳೆದ ಐದಾರು ತಿಂಗಳಿನಿಂದ ಅವರು ಕ್ರಿಕೆಟ್ ಆಡಿಲ್ಲ, ಚಿಕಿತ್ಸೆಗಾಗಿ ಅವರು ವಿದೇಶಕ್ಕೆ ಪ್ರಯಾಣಿಸುತ್ತಾರೆ ಎನ್ನಲಾಗಿದೆ.
ಭಾರತದ ವಿರುದ್ಧ ಒಂದು ಟೆಸ್ಟ್
36 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಪುಕೊವ್ಸ್ಕಿ 7 ಶತಕಗಳೊಂದಿಗೆ 45.19 ಸರಾಸರಿಯಲ್ಲಿ 2,350 ರನ್ ಗಳಿಸಿದ್ದಾರೆ. ವಿಲ್ ಪುಕೊವ್ಸ್ಕಿ ಭಾರತದ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಕೂಡ ಆಡಿದ್ದಾರೆ. ಜನವರಿ 2019 ರಲ್ಲಿ ಟೆಸ್ಟ್ ತಂಡದಲ್ಲಿ ಅವರು ಅವಕಾಶ ಪಡೆದುಕೊಂಡಿದ್ದರು, 21 ವರ್ಷ ತುಂಬುವ ಮೊದಲೇ ಅವರು ಎಸ್‌ಸಿಜಿ ಮೈದಾನದಲ್ಲಿ ಭಾರತದ ವಿರುದ್ಧ ತಮ್ಮ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದಾರೆ. ಡೇವಿಡ್ ವಾರ್ನರ್ ಅವರ ಜೊತೆ ಇನ್ನಿಂಗ್ಸ್ ಆರಂಭಿಸಿದ ಅವರು ಆ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ಗನ್ನು 62 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 10 ರನ್ ಗಳಿಸಿದರು. ಆ ಪಂದ್ಯದಲ್ಲಿ ಕೂಡ ಭುಜದ ಗಾಯಕ್ಕೆ ತುತ್ತಾಗಿದ್ದ ಅವರು ಬಳಿಕ ಆರು ತಿಂಗಳು ಕ್ರಿಕೆಟ್‌ನಿಂದ ದೂರವುಳಿದಿದ್ದರು.











Click it and Unblock the Notifications