KL Rahul: ಕೆಎಲ್ ರಾಹುಲ್‌ರನ್ನು ಕೈಬಿಟ್ಟ ಲಕ್ನೋ- ಆರ್‌ಸಿಬಿಗೆ ಕನ್ನಡಿಗ ಫಿಕ್ಸ್?
ಐಪಿಎಲ್ 2025ರ ಮೆಗಾ ಹರಾಜಿಗೆ ಮೊದಲು ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ನಿರೀಕ್ಷೆಯಂತೆ ಕನ್ನಡಿಗ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಫಿಕ್ಸ್ ಆಗಿದೆ. 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್‌ರನ್ನು ಈ ಬಾರಿ ಫ್ರಾಂಚೈಸಿ ಬಿಡುಗಡೆ ಮಾಡಿದೆ.
ಮೂಲಗಳ ಪ್ರಕಾರ, ನಿರೀಕ್ಷೆಗೆ ತಕ್ಕಂತೆ ಕೆಎಲ್ ರಾಹುಲ್ ಪ್ರದರ್ಶನ ನೀಡದೇ ಇರುವುದು. ಟಿ20 ಮಾದರಿಯಲ್ಲಿ ಅವರ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಫ್ರಾಂಚೈಸಿ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಕೆಎಲ್ ರಾಹುಲ್ ಹರಾಜಿಗೆ ಬರುವುದು ಖಚಿತವಾಗುತ್ತಿದ್ದಂತೆ ಅವರನ್ನು ಆರ್ ಸಿಬಿಗೆ ಬನ್ನಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಆರ್‌ಸಿಬಿಗೆ ಬರ್ತಾರ ಕನ್ನಡಿಗ?
ಕೆಎಲ್ ರಾಹುಲ್ ಕರ್ನಾಟಕದ ಆಟಗಾರ. ಆರ್ ಸಿಬಿ ತಂಡದ ಮಾಜಿ ಆಟಗಾರ ಕೂಡ ಹೌದು. ತಾವು ಯಾವ ತಂಡಕ್ಕೆ ಆಡಿದರೂ ತಮಗೆ ಆರ್ ಸಿಬಿ ಎಂದಿಗೂ ವಿಶೇಷವಾಗಿರುತ್ತದೆ ಎಂದು ಕೆಎಲ್ ರಾಹುಲ್ ಹಲವು ಬಾರಿ ಹೇಳಿದ್ದಾರೆ. ತವರಿನ ತಂಡ ಆಗಿರುವ ಕಾರಣ, ಅವರಿಗೆ ಆರ್ ಸಿಬಿ ಮೇಲೆ ವಿಶೇಷವಾದ ಒಲವಿದೆ.
ಇದೇ ಕಾರಣದಿಂದ ಅವರು ಆರ್ ಸಿಬಿಗೆ ಬಂದರೆ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವುದು ಅಭಿಮಾನಿಗಳ ವಾದ. ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ ಬಳಿಕ ಆರ್ ಸಿಬಿ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಅಗತ್ಯವಿದೆ. ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಕೂಡ ಮಾಡುವುದರಿಂದ ಅವರ ಆಯ್ಕೆ ಉತ್ತಮ ನಿರ್ಧಾರವಾಗುತ್ತದೆ.
ಕೆಎಲ್ ರಾಹುಲ್‌ಗೆ ಬೆಂಗಳೂರಿನಲ್ಲಿ ಆಡಿರುವ ಕೂಡ ಇದೆ. ಇಲ್ಲೇ ಆಡಿ ಬೆಳೆದಿರುವ ಕಾರಣ, ಆರ್ ಸಿಬಿ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಬಲ ಕೂಡ ಬರಲಿದೆ. ವಿಲ್ ಜ್ಯಾಕ್ಸ್‌ರನ್ನು ರಿಟೈನ್ ಮಾಡಿಕೊಂಡರೆ, ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದು. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಕೂಡ ಇರುವುದರಿಂದ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ.
ಈ ಬಾರಿ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಭವಿಷ್ಯದ ದೃಷ್ಟಿಯಿಂದ ಕೆಎಲ್ ರಾಹುಲ್ ಕೂಡ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಇಶಾನ್ ಕಿಶನ್ ಅಥವಾ ರಿಷಬ್ ಪಂತ್ ಕೂಡ ಆರ್ ಸಿಬಿಗೆ ಇರುವ ಮತ್ತೆರಡು ಆಯ್ಕೆಗಳಾಗಿದೆ. ಆದರೆ ಆರ್ ಸಿಬಿ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ನೋಡಬೇಕಿದೆ.












Click it and Unblock the Notifications