ಲಂಕಾದಲ್ಲಿ 03 ಸಿಕ್ಸರ್ ಬಾರಿಸುವ ಮೂಲಕ ದಾಖಲೆ ನಿರ್ಮಿಸುತ್ತಾರಾ ಹಿಟ್‌ಮ್ಯಾನ್?
ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಈಗಾಗಲೇ ಟಿ20 ವಿಶ್ವಕಪ್ ಗೆದ್ದು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದೆ. ಟೀಮ್ ಇಂಡಿಯಾ ಶುಕ್ರವಾರದಿಂದ ಮತ್ತೊಂದು ಪರೀಕ್ಷೆಗೆ ಒಳಗಾಗಲಿದೆ. ಗೌತಮ್ ಗಂಭೀರ್ ಮುಂದಾಳತ್ವದ ಭಾರತ, ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಸಿದ್ಧತೆ ನಡೆಸಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣು ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈಗ ಮತ್ತೆ ತಂಡ ಸೇರಿಕೊಂಡಿದ್ದಾರೆ. ಶುಕ್ರವಾರದಿಂದ ಆರಂಭವಾಗುವ ಸರಣಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಈ ವೇಳೆ ಅನುಭವಿ ಆಟಗಾರರು ತಂಡಕ್ಕೆ ಮರಳಿದ್ದು ಬೂಸ್ಟ್ ನೀಡಲಿದೆ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಇತಿಹಾಸ ನಿರ್ಮಿಸಲಿದ್ದಾರೆ.

ಮೂರು ಸಿಕ್ಸರ್
ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ರೋಹಿತ್ ಶರ್ಮಾಗೆ ಬೆಸ್ಟ್ ಚಾನ್ಸ್. ರೋಹಿತ್ ಶರ್ಮಾ ಈ ಸರಣಿಯಲ್ಲಿ ಇನ್ನು ಮೂರು ಸಿಕ್ಸರ್ ಬಾರಿಸಿದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕನ ದಾಖಲೆಯನ್ನು ಅಳಿಸಿ ಹಾಕಬಹುದು.
ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 233 ಸಿಕ್ಸರ್‌ಗಳನ್ನು ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಇವರು ಒಟ್ಟು 231 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಇನ್ನೂ ಮೂರು ಸಿಕ್ಸರ್ ಬಾರಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನಾಯಕ ಎನಿಸಿಕೊಳ್ಳಲಿದ್ದಾರೆ.
ನಾಯಕರಾಗಿ ಅತಿ ಹೆಚ್ಚು ಸಿಕ್ಸರ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ನಾಯಕರಲ್ಲಿ ಇಯಾನ್ ಮಾರ್ಗನ್ (233 ಸಿಕ್ಸರ್) ಅವರಿಗೆ ಅಗ್ರ ಸ್ಥಾನ. ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ (231 ಸಿಕ್ಸರ್) ಇದ್ದಾರೆ. ಉಳಿದಂತೆ ಮಹೇಂದ್ರ ಸಿಂಗ್ ಧೋನಿ (211 ಸಿಕ್ಸರ್‌ಗಳು), ರಿಕಿ ಪಾಂಟಿಂಗ್ (171 ಸಿಕ್ಸರ್), ಬ್ರೆಂಡನ್ ಮೆಕಲಮ್ (170 ಸಿಕ್ಸರ್) ಕ್ರಮವಾಗಿ ಮುಂದಿನ ಸ್ಥಾನಗಳಲ್ಲಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನ
ರೋಹಿತ್ ಶರ್ಮಾ ಇಲ್ಲಿಯವರೆಗೆ ಭಾರತದ ಪರ 123 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 21 ಟೆಸ್ಟ್ ನಲ್ಲಿ ಸಿಕ್ಸರ್ ಬಾರಿಸಿದ್ದು, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ತಲಾ 105 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆರಂಭಿಕರಾಗಿ ರೋಹಿತ್ ಬಡ್ತಿ ಪಡೆಯುತ್ತಿದ್ದಂತೆ ಅವರ ತಮ್ಮ ಬ್ಯಾಟಿಂಗ್ ಧಾಟಿಯನ್ನೇ ಬದಲಿಸಿದರು.
2011ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇದಾದ ಬಳಿಕ ಅವರಿಗೆ ಧೋನಿ ಓಪನರ್ ಆಗಿ ಬಡ್ತಿ ನೀಡಿದರು. ಅಲ್ಲಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ರೋಹಿತ್ ಇಲ್ಲಿಯವರೆಗೆ ಭಾರತಕ್ಕಾಗಿ 262 ODI ಪಂದ್ಯಗಳಲ್ಲಿ 10709 ರನ್ ಗಳಿಸಿದ್ದಾರೆ, ಇದರಲ್ಲಿ 31 ಶತಕಗಳು ಸೇರಿವೆ.












Click it and Unblock the Notifications