RCB: ಕೆಎಲ್ ರಾಹುಲ್ ಮೇಲೆ ಕಣ್ಣಿಟ್ಟಿದ್ದ ಆರ್ಸಿಬಿ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ್ದೇಕೆ?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. 14 ಕೋಟಿ ರೂಪಾಯಿಗೆ ಬಿಡ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್‌ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ಆರ್ ಸಿಬಿ ಕೂಡ ಕೆಎಲ್ ರಾಹುಲ್‌ಗಾಗಿ ಬಿಡ್ ಮಾಡಿದರೂ 10 ಕೋಟಿ ರೂಪಾಯಿ ದಾಟುತ್ತಿದ್ದಂತೆ ಹಿಂದೆ ಸರಿಯಿತು. ಆರ್ ಸಿಬಿ 20 ಕೋಟಿ ರೂಪಾಯಿ ಆದರೂ ಕೆಎಲ್ ರಾಹುಲ್‌ರನ್ನು ಖರೀದಿ ಮಾಡುತ್ತದೆ ಎಂದೇ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು ಆದರೆ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿತ್ತು.
ಕೆಎಲ್ ರಾಹುಲ್ ಮಾತ್ರವಲ್ಲದೆ ಮೊಹಮ್ಮದ್ ಸಿರಾಜ್, ವಿಲ್ ಜ್ಯಾಕ್ಸ್‌ರನ್ನು ಆರ್ ಸಿಬಿ ಕೈಬಿಟ್ಟಿದ್ದಕ್ಕೆ ಅಭಿಮಾನಿಗಳು ತೀವ್ರ ನಿರಾಸೆಗೊಂಡರು. ಮೊದಲ ದಿನ ಆರ್ ಸಿಬಿ ಪ್ರಮುಖ ಆಟಗಾರರನ್ನು ಕೈಬಿಟ್ಟಿದ್ದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು, ಆದರೆ ಹರಾಜಿನ ಎರಡನೇ ದಿನ ಪ್ರಮುಖ ಆಟಗಾರರನ್ನು ಖರೀದಿ ಮಾಡುವ ಮೂಲಕ ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ.

ಇದೀಗ ಆರ್ ಸಿಬಿ ಮ್ಯಾನೇಜ್‌ಮೆಂಟ್ ಹರಾಜಿಗಾಗಿ ಮಾಡಿದ ಲೆಕ್ಕಾಚಾರಗಳು, ಲಿಸ್ಟ್ ಮಾಡಿದ್ದ ಆಟಗಾರರ ಪಟ್ಟಿಯ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ಆರ್ ಸಿಬಿ ಖರೀದಿ ಮಾಡಲು ಉದ್ದೇಶಿಸಿದ್ದ ಆಟಗಾರರ ಪಟ್ಟಿಯನ್ನು ನೀಡಿದೆ.
ಕೆಎಲ್ ರಾಹುಲ್ ಕೂಡ ಲಿಸ್ಟ್‌ನಲ್ಲಿದ್ದರು
ಆರ್ ಸಿಬಿ ಟಾಪ್ ಆರ್ಡರ್ ಬ್ಯಾಟರ್ ಗಳು ಬೇಕು ಎಂದು ಒಂದಷ್ಟು ಆಟಗಾರರನ್ನು ಪಟ್ಟಿ ಮಾಡಿತ್ತು. ಇದರಲ್ಲಿ ಫಿಲ್ ಸಾಲ್ಟ್, ಕೆಎಲ್ ರಾಹುಲ್, ರೆಹಮನುಲ್ಲಾ ಗುರ್ಬಾಜ್ ಸೇರಿದಂತೆ ಹಲವು ಆಟಗಾರರು ಆರ್ ಸಿಬಿ ವಿಷ್‌ಲಿಸ್ಟ್‌ನಲ್ಲಿದ್ದರು. ಆದರೆ ಟಿ20 ಮಾದರಿಯಲ್ಲಿ ಆಟಗಾರರ ಹಿಂದಿನ ಪ್ರದರ್ಶನವನ್ನು ಪರಿಗಣಿಸಿ ಫಿಲ್ ಸಾಲ್ಟ್ ಬೇಕೇ ಬೇಕು ಎಂದು ಆರ್ ಸಿಬಿ ಮ್ಯಾನೇಜ್‌ಮೆಂಟ್ ನಿರ್ಧಾರ ಮಾಡಿತ್ತು.
ತಂಡದ ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್, ಫಿಲ್ ಸಾಲ್ಟ್‌ರ ಟಿ20 ಅಂಕಿ ಅಂಶಗಳನ್ನು ನೋಡಿ ದಂಗಾಗಿದ್ದರು. ಫಿಲ್ ಸಾಲ್ಟ್ ಆರಂಭಿಕ ಆಟಗಾರನಾಗಿ ಅದ್ಭುತ ದಾಖಲೆ ಹೊಂದಿದ್ದಾರೆ. ಪ್ರತಿ ಓವರ್ ನಲ್ಲಿ ಸಾಲ್ಟ್ 6-8 ರನ್ ಗಳಿಸಿದರೆ, ಪ್ರತಿ ನಾಲ್ಕನೇ ಓವರ್ ನಲ್ಲಿ 16-18 ರನ್ ಬಾರಿಸಿದ್ದಾರೆ ಇದನ್ನು ನಂಬೋದು ಕೂಡ ಕಷ್ಟ ಎಂದು ದಿನೇಶ್ ಕಾರ್ತಿಕ್ ಹೇಳುವುದನ್ನು ನೋಡಬಹುದು.
ಫಿಲ್ ಸಾಲ್ಟ್ ಮೇಲೆ ಕಣ್ಣಿಟ್ಟಿದ್ದರಿಂದ ಆರಂಭಿಕ ಆಟಗಾರನ ಸ್ಥಾನಕ್ಕೆ ಅವರೇ ಸೂಕ್ತ ಎಂದು ಕೆಎಲ್ ರಾಹುಲ್‌ರನ್ನು ಕೈಬಿಡಲಾಗಿದೆ. ಜಿತೇಶ್ ಶರ್ಮಾ ಕೂಡ ತಂಡದ ಮತ್ತೊಬ್ಬ ವಿಕೆಟ್ ಕೀಪರ್ ಆಗಿದ್ದು 11 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.












Click it and Unblock the Notifications