RCB: ದಿನೇಶ್ ಕಾರ್ತಿಕ್‌ರ ಫಿನಿಷರ್ ಸ್ಥಾನ ತುಂಬಲಿರುವ ಆಟಗಾರ ಯಾರು?
2025ರ ಐಪಿಎಲ್‌ಗಾಗಿ ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಸ್ಪಿನ್ ವಿಭಾಗದಲ್ಲಿ ದುರ್ಬಲವಾಗಿದೆ ಎನಿಸಿದರೂ, ವೇಗದ ಬೌಲಿಂಗ್, ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿ ಕಾಣಿಸುತ್ತಿದೆ. ಹೆಚ್ಚಿನ ಸಂಖ್ಯೆಯ ಆಲ್‌ರೌಂಡರ್ ಗಳಿದ್ದು ಬೌಲಿಂಗ್ ಆಯ್ಕೆ ಕೂಡ ಹೆಚ್ಚಾಗಿದೆ. ಕಳೆದ ಮೂರು ವರ್ಷದಿಂದ ಆರ್ ಸಿಬಿ ತಂಡದ ಫಿನಿಷರ್ ಆಗಿ ಮಿಂಚಿದ್ದ ದಿನೇಶ್ ಕಾರ್ತಿಕ್ 2024ರ ಐಪಿಎಲ್ ಬಳಿಕ ನಿವೃತ್ತಿ ಘೋಷಿಸಿದ್ದು, ಅವರ ಸ್ಥಾನ ಯಾರು ತುಂಬಲಿದ್ದಾರೆ ಎನ್ನುವ ಪ್ರಶ್ನೆ ಎದುರಾಗಿದೆ.
ಆಟಗಾರನಾಗಿ ನಿವೃತ್ತಿಯಾದರೂ ದಿನೇಶ್ ಕಾರ್ತಿಕ್ ಆರ್ ಸಿಬಿ ಬ್ಯಾಟಿಂಗ್ ಕೋಚ್, ಮೆಂಟರ್ ಆಗಿ ನೇಮಕವಾಗಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಫೈನಲ್ ಮಾಡುವಲ್ಲಿ ದಿನೇಶ್ ಕಾರ್ತಿಕ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆರಂಭಿಕರು ಯಾರು, ಮಧ್ಯಮ ಕ್ರಮಾಂಕದಲ್ಲಿ ಆಡಲು ಯಾವ ಆಟಗಾರರು ಬೇಕು, ಫಿನಿಷರ್ ಯಾರು ಬೇಕು ಎನ್ನುವ ಎಲ್ಲಾ ಲೆಕ್ಕಾಚಾರ ಹಾಕಿಯೇ ಆಟಗಾರರನ್ನು ಖರೀದಿ ಮಾಡಿದೆ.

ದಿನೇಶ್ ಕಾರ್ತಿಕ್ ಮಾಡಿದಂತೆ ಈ ಬಾರಿ ಫಿನಿಷರ್ ಪಾತ್ರ ನಿಭಾಯಿಸುವುದು ಯಾರು ಎನ್ನುವ ಪ್ರಶ್ನೆಗೆ ಮೂವರು ಉತ್ತರವಾಗಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಮೂಲಕವೇ ಹೆಸರಾಗಿರುವ ಈ ಆಟಗಾರರು ದಿನೇಶ್ ಕಾರ್ತಿಕ್ ಸ್ಥಾನವನ್ನು ತುಂಬುವ ಸಾಧ್ಯತೆ ಹೆಚ್ಚಾಗಿದೆ ಆ ಆಟಗಾರರ ಪಟ್ಟಿ ಇಲ್ಲಿದೆ.
ಜಿತೇಶ್ ಶರ್ಮಾ
ಪಂಜಾಬ್ ಕಿಂಗ್ಸ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾರನ್ನು ಈ ಬಾರಿ ಆರ್ ಸಿಬಿ 11 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಜಿತೇಶ್ ಶರ್ಮಾ ಈ ಬಾರಿ ಆರ್ ಸಿಬಿ ತಂಡದಲ್ಲಿ ಫಿನಿಷರ್ ಪಾತ್ರ ನಿಭಾಯಿಸುವ ಸಾಧ್ಯತೆ ಹೆಚ್ಚಾಗಿದೆ.
40 ಐಪಿಎಲ್ ಪಂದ್ಯಗಳನ್ನು ಆಡಿರುವ ಜಿತೇಶ್ ಶರ್ಮಾ 22.81 ಸರಾಸರಿ ಹೊಂದಿದ್ದು 151.14 ಸ್ಟ್ರೈಕ್‌ರೇಟ್‌ನಲ್ಲಿ 730 ರನ್ ಗಳಿಸಿದ್ದಾರೆ. ಇದರಲ್ಲಿ 53 ಬೌಂಡರಿಗಳಿದ್ದು 45 ಸಿಕ್ಸರ್ ಬಾರಿಸಿದ್ದಾರೆ. ಸ್ಟ್ರೈಕ್‌ರೇಟ್ ಉತ್ತಮವಾಗದ್ದು ಕೊನೆಯ ಓವರ್ ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ.
ಟಿಮ್ ಡೇವಿಡ್
ಆಸ್ಟ್ರೇಲಿಯಾ ಆಲ್‌ರೌಂಡರ್ ಟಿಮ್ ಡೇವಿಡ್ ಈಗಾಗಲೇ ತಾನೆಂತಹ ಫಿನಿಷರ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಐಪಿಎಲ್‌ನಲ್ಲಿ ಈವರೆಗೂ 38 ಪಂದ್ಯಗಳನ್ನಾಡಿದ್ದು 28.65 ಸರಾಸರಿಯಲ್ಲಿ 659 ರನ್ ಗಳಿಸಿದ್ದಾರೆ. 170.28 ಸ್ಟ್ರೈಕ್‌ರೇಟ್ ಹೊಂದಿದ್ದು, 38 ಬೌಂಡರಿ ಬಾರಿಸಿದ್ದರೆ ಬರೋಬ್ಬರಿ 46 ಸಿಕ್ಸರ್ ಬಾರಿಸಿದ್ದಾರೆ. ಬೌಂಡರಿಗಿಂತ ಸಿಕ್ಸರ್ ಬಾರಿಸುವುದೇ ಸುಲಭ ಎನ್ನುವಂತೆ ಅವರು ಬ್ಯಾಟಿಂಗ್ ಮಾಡಿದ್ದಾರೆ.
ಜೇಕಬ್ ಬೆಥೆಲ್
ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಕೂಡ ಫಿನಿಷರ್ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಿದ್ದಾರೆ. ಎಡಗೈ ಬ್ಯಾಟರ್ ಆಗಿದ್ದು, ಬೌಂಡರಿ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಆರ್ ಸಿಬಿ ಬೆಥೆಲ್‌ರನ್ನು ಕೂಡ ಫಿನಿಷರ್ ಆಗಿ ಕಣಕ್ಕಿಳಿಸುವ ಆಯ್ಕೆ ಹೊಂದಿದೆ.
ಈ ಮೂವರನ್ನು ಹೊರತುಪಡಿಸಿ ರಜತ್ ಪಟಿದಾರ್ ಕೂಡ ಫಿನಿಷರ್ ಸ್ಥಾನ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿರುವ ಪಟಿದಾರ್ ಮಧ್ಯಮ ಕ್ರಮಾಂಕದಲ್ಲಿ ಮಾತ್ರವಲ್ಲ ಫಿನಿಷರ್ ಆಗಿಯೂ ಆಡುವ ಭರವಸೆ ಮೂಡಿಸಿದ್ದಾರೆ.












Click it and Unblock the Notifications