LSG vs DC: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್‌ಗೆ ಬೂಸ್ಟ್ ನೀಡಿದ ಸ್ಫೋಟಕ ಬ್ಯಾಟರ್ ಯಾರು? ಇವರ ಹೆಸರಿನಲ್ಲಿದೆ ವೇಗದ ಶತಕದ ದಾಖಲೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಲಖ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಿತು. ಡೆಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡುವ ವೇಳೆ ಗಮನ ಸೆಳೆದ ಆಟಗಾರ 22 ವರ್ಷದ ಯುವ ಬ್ಯಾಟರ್.. ಈ ಆಟಗಾರನ ಬ್ಯಾಟಿಂಗ್ ಧಾಟಿಗೆ ಅಭಿಮಾನಿಗಳು ಫುಲ್ ಫಿದಾ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 167 ರನ್ ಸೇರಿಸಿತು. ಡೆಲ್ಲಿ ತಂಡದ ಪರ ಕುಲ್‌ದೀಪ್ ಯಾದವ್ 20 ರನ್ ನೀಡಿ ಮೂರು ವಿಕೆಟ್ ಪಡೆದರು. ಗುರಿಯನ್ನು ಹಿಂಬಾಲಿಸಿದ ಡೆಲ್ಲಿ 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 170 ರನ್ ಸಿಡಿಸಿತು. ಈ ವೇಳೆ ಯುವ ಆಟಗಾರ ಎಲ್ಲರ ಚಿತ್ತ ಕದ್ದರು.

ಯಾರು ಈ ಸ್ಫೋಟಕ ಬ್ಯಾಟರ್
ಡೇವಿಡ್ ವಾರ್ನರ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಇಳಿದ ಈ ಬ್ಯಾಟರ್ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಎಲ್ಲರ ಮನ ಗೆದ್ದರು. ಇವರೇ ಆಸ್ಟ್ರೇಲಿಯಾದ 22 ವರ್ಷದ ಜೇಕ್ ಫ್ರೇಸರ್ ಮೆಕ್‌ಗುರ್ಕ್. ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನು ಆಡಿದ ಜೇಕ್ ಫ್ರೇಸರ್ ಅಮೋಘ ಇನ್ನಿಂಗ್ಸ್ ಕಟ್ಟಿದರು. 35 ಎಸೆತಗಳಲ್ಲಿ 55 ರನ್ ಗಳಿಸುವ ಮೂಲಕ ತಂಡಕ್ಕೆ ಆಧಾರವಾದರು. ಇವರು, ನಾಯಕ ರಿಷಬ್ ಪಂತ್ ಜೊತೆಗೂಡಿ ಮೂರನೇ ವಿಕೆಟ್‌ಗೆ 46 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಜೇಕ್ ಫ್ರೇಸರ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ, ಐದು ಸಿಕ್ಸರ್ ಸೇರಿವೆ.

ಕೃನಾಲ್ ಪಾಂಡ್ಯಗೆ ಮೂರು ಸಿಕ್ಸ್
ಇನ್ನಿಂಗ್ಸ್‌ನ 13ನೇ ಓವರ್ ಮಾಡಿದ ಅನುಭವಿ ಸ್ಪಿನ್ ಬೌಲರ್ ಕೃನಾಲ್ ಪಾಂಡ್ಯ ಅವರ ಓವರ್‌ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿ ಗಮನ ಸೆಳೆದರು. ಈ ಮೂಲಕ ಸ್ಪಿನ್ ಬೌಲರ್ ಲೈನ್ ಹಾಗೂ ಲೆಂಗ್ತ್ ಹಾಳು ಮಾಡಿದರು. ಐದು ಪಂದ್ಯ ಬೆಂಚ್ ಕಾಯ್ದ ಜೇಕ್ ಫ್ರೇಸರ್ ನಂತರ ಅವಕಾಶವನ್ನು ಪಡೆದರು. ಸಿಕ್ಕ ಅವಕಾಶದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ಆಸೀಸ್ ಪರ ಪದಾರ್ಪಣೆ
ಈಗಾಗಲೇ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿರುವ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಆಡಿದ ಎರಡು ಪಂದ್ಯಗಳಲ್ಲಿ 51 ರನ್ ಸಿಡಿಸಿದ್ದಾರೆ. ಅಲ್ಲದೆ ಇವರು ಲೀಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕವನ್ನು ಸಹ ತಮ್ಮ ಹೆಸರಿಗೆ ನಮೂದಿಸಿಕೊಂಡಿದ್ದಾರೆ. 2023ರಲ್ಲಿ ಇವರು ಕೇವಲ 29 ಎಸೆತಗಳಲ್ಲಿ ಶತಕ ಬಾರಿಸಿದರು. ವಿಶೇಷ ಅಂದರೆ ಬ್ಯಾಟಿಂಗ್ ಪವರ್ ಪ್ಲೇ ಇರುವಾಗಲೇ ಶತಕ ಸಂಭ್ರಮವನ್ನು ಮಾಡಿದ್ದಾರೆ. ಎಬಿಡಿ ವಿಲಿಯರ್ಸ್ ಅವರ 31 ಎಸೆತದಲ್ಲಿ ಶತಕದ ದಾಖಲೆಯನ್ನು ಮೀರಿದ್ದಾರೆ.

ಜೇಕ್ ಫ್ರೇಸರ್ ಮೆಕ್‌ಗುರ್ಕ್ ಆಯ್ಕೆ ಹೇಗೆ?
ಐಪಿಎಲ್ 2024 ಆರಂಭಕ್ಕೂ ಮುನ್ನವೇ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎಂಗಿಡಿ ಗಾಯದ ಕಾರಣದಿಂದ ಇಡೀ ಟೂರ್ನಿಯಿಂದ ಹೊರಗುಳಿದರು. ಇವರ ಸ್ಥಾನಕ್ಕೆ ಡೆಲ್ಲಿ ಯುವ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರಿಗೆ ಮಣೆ ಹಾಕಿತು. ಹೊಡಿ ಬಡಿ ಆಟಕ್ಕೆ ಹೆಸರುವಾಸಿ ಈ ಬ್ಯಾಟರ್‌ನ ಆಟವನ್ನು ಕಂಡೇ ಡೆಲ್ಲಿ ತಂಡದಲ್ಲಿ ಸ್ಥಾನ ನೀಡಿತು.












Click it and Unblock the Notifications