ವೈಭವ್ ಸೂರ್ಯವಂಶಿಯಂತಹ ಒಬ್ಬ ಪ್ರತಿಭೆಯನ್ನ ಹುಟ್ಟುಹಾಕಲಿಲ್ಲ ಪಾಕಿಸ್ತಾನ: ತಮ್ಮ ದೇಶದ ಬಗ್ಗೆಯೇ ಅಸಹ್ಯಪಟ್ಟುಕೊಂಡ ವಾಸಿಂ ಅಕ್ರಮ್
Wasim Akram: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೀಗ ಇವರ ಉದಾಹರಣೆ ತೆಗೆದುಕೊಂಡ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ. ಈ ಯುವ ಪ್ರತಿಭೆಯ ಪ್ರದರ್ಶನವನ್ನು ಉದಾಹರಣೆ ನೀಡಿದ ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಾಸಿಮ್ ಅಕ್ರಮ್ ಅವರು ತಮ್ಮ ದೇಶದ ಪ್ರಸ್ತುತ ಕ್ರಿಕೆಟ್ ಬಿಕ್ಕಟ್ಟು ಹಾಗೂ ಹೊಸ ಬ್ಯಾಟಿಂಗ್ ಪ್ರತಿಭೆಗಳ ಕೊರತೆಯ ಬಗ್ಗೆ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಸಾಧನೆ ಬಗ್ಗೆ ಕೊಂಡಾಡಿದ ಅಕ್ರಮ್
ಇತ್ತೀಚೆಗೆ ನಡೆದ 19 ವಯಸ್ಸಿನೊಳಗಿನವರ (U-19) ಕ್ರಿಕೆಟ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ದಾಖಲೆಯ ಶತಕ ಸಿಡಿಸಿ ಮಿಂಚಿದ್ದರು. ಎಂದು ವಾಸಿಮ್ ಅಕ್ರಮ್ ಅವರು ಉಲ್ಲೇಖಿಸಿ ಗಮನ ಸೆಳೆದಿದ್ದಾರೆ.
ಪಾಕಿಸ್ತಾನಕ್ಕೆ ವಾಸಿಂ ಅಕ್ರಮ್ ತರಾಟೆ
'ಭಾರತದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಯಂತಹ ಸ್ಫೋಟಕ ಬ್ಯಾಟರ್‌ಗಳು ಉದಯಿಸುತ್ತಿದ್ದಾರೆ. ಆದರೆ ನಮ್ಮ ಪಾಕಿಸ್ತಾನದಲ್ಲಿ ಕಳೆದ ಕೆಲ ವರ್ಷಗಳಿಂದ ಇಂತಹ ಒಬ್ಬನೇ ಒಬ್ಬ ಅದ್ಭುತ ಯುವ ಬ್ಯಾಟರ್ ಅನ್ನು ತರಬೇತುಗೊಳಿಸಿ ಮುಂಚೂಣಿಗೆ ತರಲು ನಮಗೆ ಸಾಧ್ಯವಾಗಿದೆಯೇ?,' ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯಕ್ಕೆ ಪ್ರಮುಖ ಕಾರಣಗಳು
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ದೇಶಿಯ ಕ್ರಿಕೆಟ್ ವ್ಯವಸ್ಥೆಯ ಮೂಲಸೌಕರ್ಯಗಳ ಬಗ್ಗೆ ಮಾತನಾಡಿದ ಅಕ್ರಮ್ ಅವರು, ಬ್ಯಾಟಿಂಗ್ ಕುರಿತು ಹಲವು ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಪದೇ ಪದೇ ನಡೆಯುವ ಅಧ್ಯಕ್ಷರ ಹಾಗೂ ಆಯ್ಕೆ ಸಮಿತಿಯ ಬದಲಾವಣೆಗಳಿಂದಾಗಿ ಉದಯೋನ್ಮುಖ ಆಟಗಾರರಿಗೆ ದೀರ್ಘಕಾಲದ ಭದ್ರತೆ ಸಿಗುತ್ತಿಲ್ಲ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ.
'ಯುವ ಆಟಗಾರರಿಗೆ ವ್ಯವಸ್ಥಿತ ತರಬೇತಿ ಮುಖ್ಯ'
ಶಾಲಾ ಹಾಗೂ ಕ್ಲಬ್ ಮಟ್ಟದ ಕ್ರಿಕೆಟ್ ಸಂಪೂರ್ಣವಾಗಿ ಕುಸಿದಿದೆ. ಭಾರತದಲ್ಲಿ 'ರಾಹುಲ್ ದ್ರಾವಿಡ್' ಅವರಂತಹ ದಿಗ್ಗಜರು ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿ ಬಲವಾದ ಅಡಿಪಾಯ ಹಾಕಿದಂತೆ, ಪಾಕಿಸ್ತಾನದಲ್ಲಿ ವ್ಯವಸ್ಥಿತ ತರಬೇತಿ ನೀಡುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಪ್ರಸ್ತುತ ಪಾಕಿಸ್ತಾನದ ಯುವ ಆಟಗಾರರು ತಂಡಕ್ಕಾಗಿ ಆಡುವ ಬದಲು ತಮ್ಮ ಸ್ವಂತ ಸ್ಥಾನ ಕಾಯ್ದುಕೊಳ್ಳಲು ಆಡುತ್ತಿದ್ದಾರೆ. ಪವರ್-ಹಿಟ್ಟಿಂಗ್ ಹಾಗೂ ಆಧುನಿಕ ಕ್ರಿಕೆಟ್‌ಗೆ ತಕ್ಕಂತೆ ಆಕ್ರಮಣಕಾರಿ ಆಟ ಆಡುವ ಧೈರ್ಯ ಯಾರಲ್ಲೂ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಪಾಕಿಸ್ತಾನ ಭಾರತದಿಂದ ತುಂಬಾ ಕಲಿಯಬೇಕಿದೆ'
ಭಾರತವು ತಳಮಟ್ಟದ ಮೂಲಸೌಕರ್ಯ, ಐಪಿಎಲ್‌ನಂತಹ ದೊಡ್ಡ ವೇದಿಕೆ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮೂಲಕ ನಿರಂತರವಾಗಿ ಜೈಸ್ವಾಲ್, ಶುಭ್ಮನ್ ಗಿಲ್ ಮತ್ತು ವೈಭವ್ ಸೂರ್ಯವಂಶಿಯಂತಹ ಜಾಗತಿಕ ಮಟ್ಟದ ಬ್ಯಾಟರ್‌ಗಳನ್ನು ತಯಾರಿ ಮಾಡುತ್ತಿದೆ. ಆದರೆ ಪಾಕಿಸ್ತಾನವು ಇನ್ನೂ ಹಳೆಯ ಶೈಲಿಯ ಬ್ಯಾಟಿಂಗ್ ಮಾದರಿಯನ್ನೇ ಮುಂದುವರೆಸಿದ್ದು, ಶೀಘ್ರವೇ ಆಡಳಿತಾತ್ಮಕ ಮತ್ತು ಮೂಲಭೂತ ಬದಲಾವಣೆಗಳನ್ನು ಮಾಡಿಕೊಳ್ಳದಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ವಾಸಿಮ್ ಅಕ್ರಮ್ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ತಮ್ಮ ದೇಶದಲ್ಲಿ ಕ್ರಿಕೆಟ್ ಯಾವ ಮಟ್ಟಿಗೆ ಇದೆ ಎಂದು ಅಕ್ರಮ್ ಅವರು ಬಿಚ್ಚಿಟ್ಟಿದ್ದಾರೆ.


Click it and Unblock the Notifications
