55, 86, 315,15,000.. ಕ್ರಿಕೆಟ್‌ ದೇವರು ಸಚಿನ್ ರೆಕಾರ್ಡ್‌ ಬ್ರೇಕ್: ಕಿಂಗ್ ಕೊಹ್ಲಿ ಐತಿಹಾಸಿಕ ದಾಖಲೆ

Virat Kohli Records: ಕೇರಳದ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಸೆಪ್ಟೆಂಬರ್ 27) ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದೇ ವೇಳೆ ಟೀಮ್ ಇಂಡಿಯಾ ಪರ ಅಜೇಯ 139 ರನ್‌ಗಳನ್ನು ಸಿಡಿಸಿದ ವಿರಾಟ್‌ ಕೊಹ್ಲಿ ಅವರು ಹಲವು ಐತಿಹಾಸಿಕ ದಾಖಲೆಗಳನ್ನು ಬರೆದರು. ಇದರಲ್ಲಿ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ರೆಕಾರ್ಡ್‌ ಮುರಿದಿರುವ ಸಾಧನೆಯೂ ಸೇರಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ರನ್ ಮಳೆಯನ್ನೇ ಹರಿಸಿದ್ದು, ತಮ್ಮ ಏಕದಿನ ವೃತ್ತಿಜೀವನದ 55ನೇ ಶತಕ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಅಷ್ಟೇ ಅಲ್ಲದೆ, ಕ್ರಿಕೆಟ್ ದೇವರು ಅಂತಲೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯೊಂದನ್ನು ಧೂಳೀಪಟ ಮಾಡಿದರು.

Virat Kohli Records Breaks Team India Legend Sachin Tendulkar s ODI Record With 15 000 Runs

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ಭಾರತದ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೊಹ್ಲಿ ಬ್ರೇಕ್ ಮಾಡಿದ್ದಾರೆ. ವೆಸ್ಟ್‌ ಇಂಡೀಸ್ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಆಡಿದ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಡಿ ದಾಟಿದರು. ಈ ಮೂಲಕ ಏಕದಿನ ಮಾದರಿಯಲ್ಲಿ ವೇಗವಾಗಿ 15 ಸಾವಿರ ರನ್ ಪೂರೈಸಿದ ವಿಶ್ವದ ಎರಡನೇ ಬ್ಯಾಟರ್ ಎಂಬ ಹೇಗ್ಗಳಿಕೆಗೆ ಪಾತ್ರರಾದರು.

ಇದಕ್ಕೂ ಮುಂಚೆ ಸಚಿನ್ ತೆಂಡೂಲ್ಕರ್ 377 ಇನಿಂಗ್ಸ್‌ಗಳಲ್ಲಿ (387 ಪಂದ್ಯ) ಈ ಸಾಧನೆ ಮಾಡಿದ್ದರು. ಆದರೆ ವಿರಾಟ್ ಕೊಹ್ಲಿ ಕೇವಲ 303 ಇನಿಂಗ್ಸ್‌ಗಳಲ್ಲಿ (315 ಪಂದ್ಯ) ಈ ರನ್ ಕಲೆಹಾಕುವ ಮೂಲಕ ಸಚಿನ್ ದಾಖಲೆಯನ್ನು ಅತ್ಯಂತ ವೇಗವಾಗಿ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಶತಕ ಸಿಡಿಸಿದ ವಿರಾಟ್ ಕೊಹ್ಲಿ- ನಾಯಕ ಶುಭ್‌ಮನ್ ಗಿಲ್

ವೆಸ್ಟ್ ಇಂಡೀಸ್ ನೀಡಿದ್ದ 296 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ (32) ಬೇಗನೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆದರೆ, 13ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ, ನಾಯಕ ಶುಭಮನ್ ಗಿಲ್ ಅವರೊಂದಿಗೆ ಸೇರಿ ವಿಂಡೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ 55ನೇ ಶತಕದ ದಾಖಲೆ

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್‌ಗಿಳಿದ ವಿರಾಟ್‌ ಕೊಹ್ಲಿ ಅವರು ಕೇವಲ 40 ಎಸೆತಗಳಲ್ಲಿ ಅರ್ಧಶತಕ ಹಾಗೂ 74 ಎಸೆತಗಳಲ್ಲಿ ತಮ್ಮ 55ನೇ ಏಕದಿನ ಶತಕ (ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 86ನೇ ಶತಕ) ಪೂರೈಸಿದರು. ಅಂತಿಮವಾಗಿ ಕೇವಲ 88 ಎಸೆತಗಳಲ್ಲಿ ಭರ್ಜರಿ 139 ರನ್ ಸಿಡಿಸಿ ಅಜೇಯರಾಗಿ ಉಳಿದು ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಮತ್ತೊಂದೆಡೆ ಜವಾಬ್ದಾರಿಯುತ ಆಟವಾಡಿದ ನಾಯಕ ಶುಭಮನ್ ಗಿಲ್, 108 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 110 ರನ್ ಬಾರಿಸಿ ಶತಕದ ಸಂಭ್ರಮ ಆಚರಿಸಿದರು. ಕೊಹ್ಲಿ ಮತ್ತು ಗಿಲ್ ನಡುವೆ ಎರಡನೇ ವಿಕೆಟ್‌ಗೆ ಬಂದ 151 ರನ್‌ಗಳ ಭರ್ಜರಿ ಪಾಲುದಾರಿಕೆಯ ನೆರವಿನಿಂದ ಭಾರತ ತಂಡವು ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ದಾಖಲಿಸಿತು.

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ದಾಖಲೆಗಳು

* ಪಂದ್ಯ: 315 ಪಂದ್ಯ
* ರನ್: 15,000*
* ಶತಕಗಳು: 55
* ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ: 86

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+