Virat Kohli: ಖಾಲಿಯಾಗಿದ್ದ ಕ್ರಿಕೆಟ್ ‘ಗರ್ಭಗುಡಿ’ಗೆ ಮತ್ತೊಬ್ಬ ದೇವರ ಆಗಮನ!
ಶತಕೋಟಿ ಭಾರತೀಯರಿಗೆ ಈ ದಿನ ಎಂದೆಂದಿಗು ಮರೆಯಲು ಆಗಲ್ಲ. ಯಾಕಂದ್ರೆ ಒಂದು ಕಡೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ನಿರ್ಮಾಣ ಮಾಡಿದ್ದ ದಾಖಲೆ ಇಂದು ಮುರಿದು ಹೋಗಿದೆ. ಇನ್ನೊಂದೆಡೆ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆ ಭಾರತೀಯನೇ ಮುರಿದಿದ್ದಾನೆ. ಹೀಗೆ ಎಷ್ಟೋ ಜನರ ಡೈರಿಯಲ್ಲಿ 15 ನವೆಂಬರ್ 2023 ಅಚ್ಚಳಿಯದೆ ಉಳಿಯಲಿದೆ. ಇದಕ್ಕೆಲ್ಲಾ ಕಾರಣರಾದ ಮಾನ್ಯ ಕೊಹ್ಲಿ ಅವರಿಗೆ ಈಗ ಧನ್ಯವಾದ ಹೇಳಬೇಕಿದೆ.
ವಿರಾಟ್ ಕೊಹ್ಲಿ ಅಂದ್ರೆ ಮಾಸ್, ವಿರಾಟ್ ಕೊಹ್ಲಿ ಅಂದ್ರೆ ಕ್ಲಾಸ್.. ಹೀಗೆ ಎಲ್ಲದಕ್ಕೂ ಈ ನಮ್ಮ ಕೊಹ್ಲಿಯವರೆ ಮಾದರಿ. ಇಂತಿಪ್ಪ ಕೊಹ್ಲಿ ಮೊನ್ನೆ ಮೊನ್ನೆ ತಾನೆ ಏಕದಿನ ಕ್ರಿಕೆಟ್ ಅಖಾಡದಲ್ಲಿ ತಮ್ಮ 48ನೇ ಶತಕ ಬಾರಿಸಿದ್ದರು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು, ಸಚಿನ್ ಅವರ ದಾಖಲೆಯನ್ನ ಕೊಹ್ಲಿ ಇದೇ ವಿಶ್ವಕಪ್ ಅಖಾಡದಲ್ಲಿ ಮುರಿಯುತ್ತಾರೆ ಅಂತಾ. ಈ ನಂಬಿಕೆಯನ್ನು ವಿರಾಟ್ ಕೊಹ್ಲಿ ಸುಳ್ಳು ಮಾಡಲಿಲ್ಲ. ಅದರಲ್ಲೂ 05 ನವೆಂಬರ್ 2023ರ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ತಮ್ಮ 49ನೇ ಶತಕ ಬಾರಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆಗೂ ಸಮವಾಗಿ ನಿಂತರು. ಇದೀಗ ನೋಡಿದರೆ ಕ್ರಿಕೆಟ್ ದೇವರು ಸಚಿನ್ ದಾಖಲೆಯನ್ನೇ ಸರಿಗಟ್ಟಿದ್ದಾರೆ ಕೊಹ್ಲಿ.

2009ರಲ್ಲಿ ಕೊಹ್ಲಿ ಮೊದಲ ಶತಕ!
ಅಂದಹಾಗೆ ಇದೀಗ ತಮ್ಮ 50ನೇ ಸೆಂಚ್ಯುರಿ ಬಾರಿಸಿರುವ ವಿರಾಟ್ ಕೊಹ್ಲಿ 24 ಡಿಸೆಂಬರ್ 2009 ರಂದು ತಮ್ಮ ಮೊದಲ ಶತಕ ಬಾರಿಸಿದ್ದರು. ಶ್ರೀಲಂಕಾ ವಿರುದ್ಧ ಕೊಲ್ಕತ್ತಾ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲನೇ ಸೆಂಚ್ಯುರಿ ದಾಖಲಿಸಿದ್ದರು. ಕಳೆದ 14 ವರ್ಷಗಳ ಅಂತರದಲ್ಲಿ ಮಿಕ್ಕ 49 ಶತಕಗಳನ್ನು ಬಾರಿಸಿದ್ದಾರೆ ವಿರಾಟ್ ಕೊಹ್ಲಿ. ಇಂದಿನ ಪಂದ್ಯದಲ್ಲೂ ವಿರಾಟ್ ಶತಕ ಬಾರಿಸಿ, ಇತಿಹಾಸ ನಿರ್ಮಿಸುತ್ತಾರೆ ಎನ್ನುವ ಅಭಿಮಾನಿಗಳ ಕನಸು ಈ ಮೂಲಕ ನನಸಾಗಿದೆ. ಇದರ ಜತೆ ಟೀಂ ಇಂಡಿಯಾ 2023ರ ವಿಶ್ವಕಪ್ ಟ್ರೊಫಿ ಗೆಲ್ಲಲು ಮತ್ತಷ್ಟು ಹತ್ತಿರವಾಗುತ್ತಿದೆ.
ಸಚಿನ್ ತವರಿನಲ್ಲೇ ಕೊಹ್ಲಿ ಸಾಧನೆ!
ಕ್ರಿಕೆಟ್ ಜಗತ್ತಿನ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್‌ರ ತವರು ಮಹಾರಾಷ್ಟ್ರದ ಮುಂಬೈ ನಗರಿಯಲ್ಲೇ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 49ನೇ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ದಾಖಲೆಗೆ ಸಮವಾಗಿ ನಿಂತಿದ್ದರು. ಇದೀಗ, ಏಕದಿನ ಕ್ರಿಕೆಟ್ ಮಾದರಿಯಲ್ಲಿ 50ನೇ ಸೆಂಚ್ಯುರಿ ಬಾರಿಸಿ ಕ್ರಿಕೆಟ್ ಚರಿತ್ರೆಯಲ್ಲಿ ಯಾರೂ ಮಾಡಲು ಆಗದ ದಾಖಲೆ ನಿರ್ಮಿಸಿದ್ದಾರೆ. ಮತ್ತೊಂದು ಕಡೆ ಭಾರತ ತಂಡ 2023ರ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ಸ್ ಪಂದ್ಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ 397 ರನ್ ಗಳಿಸುವುದಕ್ಕೂ ಕೊಹ್ಲಿ ಕೊಡುಗೆ ನೀಡಿದ್ದಾರೆ.

ಫೈನಲ್ ಪಂದ್ಯದ ಮೇಲೆ ಎಲ್ಲರ ಕಣ್ಣು!
ಇನ್ನು ಈಗಿನ ಲೆಕ್ಕಾಚಾರದ ಪ್ರಕಾರ ಭಾರತ ತಂಡ ನೀಡಿರುವ 398 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ಮುಟ್ಟಲು ಸಾಧ್ಯವೇ ಇಲ್ಲ. ಹೀಗಾಗಿ ಈಗಾಗಲೇ ಭಾರತದ ಅಭಿಮಾನಿಗಳು ನ್ಯೂಜಿಲೆಂಡ್ ವಿರುದ್ಧ ಗೆಲುವು ನಮಗೆ ಫಿಕ್ಸ್ ಅಂತಾ ಅಂದುಕೊಂಡಿದ್ದಾರೆ. ಹೀಗಾಗಿ ಈಗ 2023ರ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಈ ಮೂಲಕ ಭಾರತ ತಂಡ ಅಂತಿಮ ಪಂದ್ಯವನ್ನ ಗೆದ್ದು ತವರು ನೆಲದಲ್ಲಿ 2ನೇ ಬಾರಿಗೆ ಹಾಗೂ ಒಟ್ಟಾರೆ 3ನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ತನ್ನ ಮುಡಿಗೇರಿಸಿಕೊಳ್ಳಲು ಈಗ ತಯಾರಿ ಆರಂಭಿಸಿದೆ. ಒಟ್ನಲ್ಲಿ ಏನೇ ಆಗಲಿ ಭಾರತ ತಂಡ ಈ ಬಾರಿ ವಿಶ್ವಕಪ್ ಟ್ರೋಫಿ ತನ್ನ ಮುಡಿಗೆ ಏರಿಸಿಕೊಳ್ಳಲಿ ಅನ್ನೋದೆ ಶತಕೋಟಿ ಭಾರತೀಯರ ಆಸೆಯಾಗಿದೆ. ಹೀಗಾಗಿ ಭಾರತದ ಕ್ರಿಕೆಟ್ ಆಟಗಾರರು ಕೂಡ ಚಳಿಯಲ್ಲೂ ಬೆವರು ಹರಿಸಿ ಆಟವಾಡುತ್ತಿದ್ದಾರೆ.












Click it and Unblock the Notifications