Virat Kohli: ಬ್ಯಾನ್‌ನಿಂದ ಜಸ್ಟ್ ಮಿಸ್ ಆದ ವಿರಾಟ್ ಕೊಹ್ಲಿ! ದಂಡ ವಿಧಿಸಿ ಎಚ್ಚರಿಕೆ ಕೊಟ್ಟ ಐಸಿಸಿ
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದ್ದು ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ಪರವಾಗಿ ಮೊದಲ ಟೆಸ್ಟ್ ಆಡಿದ 19 ವರ್ಷದ ಆಟಗಾರ ಸ್ಯಾಮ್ ಕೊನ್‌ಸ್ಟಾಸ್ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದರು. ಬುಮ್ರಾರನ್ನು ಸಮರ್ಥವಾಗಿ ಎದುರಿಸಿದ ಅವರು 65 ಎಸೆತಗಳಲ್ಲಿ 60 ರನ್ ಗಳಿಸಿದರು. ಇದೇ ಪಂದ್ಯದಲ್ಲಿ ಕೋನ್‌ಸ್ಟಾಸ್ ವಿರಾಟ್ ಕೊಹ್ಲಿ ನಡುವೆ ಕೂಡ ವಾಗ್ವಾದ ನಡೆಯಿತು.
ಸ್ಯಾಮ್ ಕೊನ್‌ಸ್ಟಾಸ್ ಜೊತೆಗೆ ಮೈದಾನದಲ್ಲೇ ಕೊಹ್ಲಿ ವಾಗ್ವಾದ ನಡೆಸಿದರು. ಕೊಹ್ಲಿ ವರ್ತನೆಯಿಂದ ಮುಂದಿನ ಟೆಸ್ಟ್‌ನಲ್ಲಿ ಬ್ಯಾನ್ ಆಗುವ ಆತಂಕ ಕೂಡ ಇತ್ತು. ಆದರೆ ಅವರಿಗೆ ಎಚ್ಚರಿಕೆ ನೀಡಿದ್ದು ಪಂದ್ಯದ ಶುಲ್ಕದ 20% ದಂಡ ವಿಧಿಸಲಾಗಿದೆ. ಜೊತೆಗೆ ಒಂದು ಡಿಮೆರಿಟ್ ಅಂಕವನ್ನು ಕೂಡ ಪಡೆದಿದ್ದಾರೆ.

ಘಟನೆಯ ವಿವರ
ಬೆಳಗಿನ ಸೆಷನ್‌ನ 10ನೇ ಓವರ್ ಬಳಿಕ ಕೊಹ್ಲಿ ಮತ್ತು ಕೋನ್‌ಸ್ಟಾಸ್ ಪಿಚ್ ಬಳಿ ಜಗಳವಾಡಿಕೊಂಡಾಗ ಈ ಘಟನೆ ನಡೆದಿದೆ. ಕ್ರೀಸ್‌ನಿಂದ ತಿರುಗಿ ಇನ್ನೊಂದು ಕಡೆ ಹೋಗುತ್ತಿದ್ದ ಕೋನ್‌ಸ್ಟಾಸ್, ಕೊಹ್ಲಿ ಡಿಕ್ಕಿ ಹೊಡೆದುಕೊಂಡರು. ಬಳಿಕ ಇಬ್ಬರ ನಡುವೆ ವಾಗ್ವಾದ ಶುರುವಾಯಿತು. ಆಸ್ಟ್ರೇಲಿಯಾ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಮತ್ತು ಆನ್-ಫೀಲ್ಡ್ ಅಂಪೈರ್ ಮೈಕೆಲ್ ಗಾಫ್ ತಕ್ಷಣವೇ ಇಬ್ಬರ ಬಳಿ ಬಂದು ಪರಿಸ್ಥಿತಿ ತಿಳಿಗೊಳಿಸಿದರು.
ಮರುಪ್ರಸಾರದಲ್ಲಿ ಇದು ಕೊಹ್ಲಿ ಉದ್ದೇಶಪೂರ್ವಕವಾಗಿ ಮಾಡಿದ್ದೋ ಅಥವಾ ಆಕಸ್ಮಿಕವೋ ಎನ್ನುವ ಗೊಂದಲವಾಯಿತು. ಹಲವರು ಹಲವು ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ನೀತಿ ಸಂಹಿತೆಯ ಮೊದಲನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಎದುರಾಳಿ ಜೊತೆ ದೈಹಿಕವಾಗಿ ಜಗಳವಾಡಲು ಪ್ರಯತ್ನಿಸಿದ್ದಕ್ಕಾಗಿ ಕೊಹ್ಲಿಯನ್ನು ತಪ್ಪಿತಸ್ಥ ಎಂದು ಕಂಡುಹಿಡಿಯಿತು.
ಪರ ವಿರೋಧ ಚರ್ಚೆ
ಈ ಘಟನೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಕೊಹ್ಲಿ ಅನಗತ್ಯವಾಗಿ ಆಕ್ರಮಣಕಾರಿಯಾಗುತ್ತಾರೆ ಎಂದು ಹಲವರು ಟೀಕಿಸಿದ್ದಾರೆ. ಮತ್ತಷ್ಟು ಜನ ಕೊಹ್ಲಿ ಇರುವುದೇ ಹೀಗೆ, ಇದು ಕೂಡ ಆಟದ ತಂತ್ರ ಎಂದು ಹೇಳಿದ್ದಾರೆ. ಆಸ್ಟ್ರೇಲಿಯನ್ನರು ಕೆಣಕಿದರೆ ನಾವೇಕೆ ಸುಮ್ಮನಿರಬೇಕು ಎಂದು ಹಲವರು ಕೊಹ್ಲಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಮೊದಲ ದಿನ ಆಸ್ಟ್ರೇಲಿಯಾ ಅಬ್ಬರ
ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನವೇ ಆಸ್ಟ್ರೇಲಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ. ಸ್ಯಾಮ್ ಕೋನ್‌ಸ್ಟಾಸ್ 60 ರನ್ ಗಳಿಸಿದರೆ, ಉಸ್ಮಾನ್ ಖವಾಜ 57 ರನ್, ಮಾರ್ನಸ್ ಲಾಬುಸ್ಚಾಗ್ನೆ 72 ರನ್ ಗಳಿಸಿ ಭಾರತೀಯ ಬೌಲರ್ ಗಳನ್ನು ಕಾಡಿದರೆ ಸ್ಟೀವನ್ ಸ್ಮಿತ್ ಅಜೇಯ 68 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. 3 ವಿಕೆಟ್ ಪಡೆದ ಬುಮ್ರಾ ಮಾತ್ರ ಭಾರತದ ಪರ ಯಶಸ್ವೀ ಬೌಲರ್ ಎನಿಸಿಕೊಂಡರು.












Click it and Unblock the Notifications