Virat Kohli: ವಿರಾಟ್ ಕೊಹ್ಲಿಯದ್ದು ಅದೇ ರಾಗ ಅದೇ ಹಾಡು..
ವಿರಾಟ್ ಕೊಹ್ಲಿ, ಚೇಸಿಂಗ್ ಕಿಂಗ್, ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್ ಎಂದೇ ಹೆಸರಾದವರು. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಶತಕಗಳನ್ನು ಸಿಡಿಸಿ ಮಿಂಚಿದವರು. ಕೊಹ್ಲಿ ಎಂತಹ ದಿಗ್ಗಜ ಬ್ಯಾಟರ್ ಆದರೂ ಇತ್ತೀಚೆಗೆ ಪದೇ ಪದೇ ಒಂದೇ ತಪ್ಪು ಮಾಡುತ್ತಿದ್ದು ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ. ಆಫ್‌ಸ್ಟಂಪ್‌ನಿಂದ ಹೊರಹೋಗುವ ಚೆಂಡನ್ನು ಆಡಲು ಹೋಗಿ ಪದೇ ಪದೇ ಸ್ಲಿಪ್ ಅಥವಾ ಕೀಪರ್ ಗೆ ಕ್ಯಾಚ್ ಕೊಟ್ಟು ಔಟಾಗುತ್ತಿರುವ ಕೆಟ್ಟ ಸಂಪ್ರದಾಯವನ್ನು ಗಬ್ಬಾ ಟೆಸ್ಟ್‌ನಲ್ಲಿ ಕೂಡ ಮುಂದುವರೆಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ ಮೂರು ರನ್ ಗಳಿಸಿ ಔಟಾಗಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಭಾರತ ತಂಡ ಬಳಿಕ ಬ್ಯಾಟಿಂಗ್ ಆರಂಭಿಸಿತು. ಆರಂಭದಲ್ಲೇ ಆಸ್ಟ್ರೇಲಿಯಾ ವೇಗಿಗಳ ಮಾರಕ ದಾಳಿಗೆ ಭಾರತ ತತ್ತರಿಸಿದೆ.

39 ರನ್ ಗಳಿಸುವಷ್ಟರಲ್ಲಿ ಭಾರತ ಈಗಾಗಲೇ ಮೂರು ವಿಕೆಟ್ ಕಳೆದುಕೊಂಡಿದೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಔಟಾಗಿದ್ದು, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಕ್ರೀಸ್‌ನಲ್ಲಿದ್ದು, ಸದ್ಯ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಅದೇ ರಾಗ ಅದೇ ಹಾಡು...
ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟರ್ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಅವರ ದೌರ್ಬಲ್ಯದಿಂದ ಹೊರ ಬರಲು ಅವರು ಪರದಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೊಹ್ಲಿಯನ್ನು ಔಟ್ ಮಾಡುವುದು ತುಂಬಾ ಸುಲಭ ಎನ್ನುವಂತೆ ಬೌಲರ್ ಗಳು ಪರಿಗಣಿಸಿದ್ದಾರೆ. 6 ಅಥವಾ 7ನೇ ಸ್ಟಂಪ್‌ನಲ್ಲಿ ಬೌಲಿಂಗ್ ಮಾಡಿದರೆ ಸಾಕು ಕೊಹ್ಲಿ ತಾನಾಗಿಯೇ ಕೀಪರ್ ಅಥವಾ ಸ್ಲಿಪ್‌ನಲ್ಲಿ ಕ್ಯಾಚ್ ಕೊಟ್ಟು ಔಟಾಗುತ್ತಾರೆ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.
ಗಬ್ಬಾ ಟೆಸ್ಟ್‌ನಲ್ಲಿ ಕೂಡ ಜೋಶ್ ಹೇಜಲ್‌ವುಡ್ ಆಫ್ ಸ್ಟಂಪ್‌ನಿಂದ ಆಚೆ ಎಸೆದ ಚೆಂಡನ್ನು ಆಡಲು ಹೋದ ಕೊಹ್ಲಿ ಕೀಪರ್ ಗೆ ಕ್ಯಾಚ್ ಕೊಟ್ಟು ಔಟಾಗಿದ್ದಾರೆ. ಈ ಸರಣಿಯಲ್ಲಿ ಅವರು ಇದೇ ರೀತಿ ಮೂರನೇ ಬಾರಿಗೆ ಔಟಾಗುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ತಂಡ ಸಂಕಷ್ಟದಲ್ಲಿದ್ದಾಗ ಕೊಹ್ಲಿ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಬೇಕಿತ್ತು, ಪದೇ ಪದೇ ಅದೇ ರೀತಿ ಔಟಾಗುತ್ತಿರುವುದು ಅವರ ಗಮನಕ್ಕೆ ಬಂದಿಲ್ಲವಾ ಅಥವಾ ಆ ದೌರ್ಬಲ್ಯದಿಂದ ಹೊರಬರಲು ಆಗುತ್ತಿಲ್ಲವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಮೀಮ್ಸ್‌ಗಳನ್ನು ಮಾಡುತ್ತಿರುವ ಫ್ಯಾನ್ಸ್ ಕೊಹ್ಲಿಯನ್ನು ಟೀಕಿಸುತ್ತಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಾದರೂ ವಿರಾಟ್ ಕೊಹ್ಲಿ ಈ ರೀತಿ ಔಟಾಗುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಲಿ, ದೊಡ್ಡ ಮೊತ್ತದ ರನ್ ಗಳಿಸಲಿ ಎಂದು ಹಾರೈಸಿದ್ದಾರೆ.












Click it and Unblock the Notifications