Virat Kohli Birthday: ಕ್ರಿಕೆಟ್ ಸಾಮ್ರಾಟ, ಕಿಂಗ್ ಕೊಹ್ಲಿ ಹೆಸರಿನಲ್ಲಿವೆ ಟಾಪ್ 10 ವಿಶ್ವ ದಾಖಲೆಗಳು
Virat Kohli Birthday Special: ಭಾರತೀಯ ಕ್ರಿಕೆಟ್ನ ಆಧುನಿಕ ಯುಗದ ದಂತಕಥೆ ವಿರಾಟ್ ಕೊಹ್ಲಿ ಅವರು ಇಂದು (ನವೆಂಬರ್ 05) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರು ಟೀಮ್ ಇಂಡಿಯಾಗೆ ನೀಡಿದ ಕೊಡುಗೆ ಅಪಾರವಾಗಿದೆ. ಹಾಗಾದ್ರೆ ಅವರ ಟಾಪ್ ರೇಕಾರ್ಡ್ಸ್ಗಳ ಸಂಪೂರ್ಣ ವಿವರನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿರಾಟ್ ಕೊಹ್ಲಿ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿ, ಶಿಸ್ತು ಮತ್ತು ಸ್ಥಿರ ಪ್ರದರ್ಶನದಿಂದ ವಿಶ್ವ ಕ್ರಿಕೆಟ್ನಲ್ಲಿ 'ಕಿಂಗ್ ಕೊಹ್ಲಿ' ಎಂದೇ ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ಬರೆದಿರುವ 10 ಅಪರೂಪದ ಹಾಗೂ ಪ್ರಮುಖ ದಾಖಲೆಗಳ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

1. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳು
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ. ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಹಿಂದಿಕ್ಕಿ, ಏಕದಿನ ಮಾದರಿಯಲ್ಲಿ 50ಕ್ಕೂ ಹೆಚ್ಚು ಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ODIನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದವರ ಪಟ್ಟಿ
* ವಿರಾಟ್ ಕೊಹ್ಲಿ (ಭಾರತ) - 55 ಶತಕಗಳು (318 ಪಂದ್ಯಗಳು)
* ಸಚಿನ್ ತೆಂಡೂಲ್ಕರ್ (ಭಾರತ) - 49 ಶತಕಗಳು (463 ಪಂದ್ಯಗಳು)
* ರೋಹಿತ್ ಶರ್ಮಾ (ಭಾರತ) - 35 ಶತಕಗಳು (292 ಪಂದ್ಯಗಳು)
* ರಿಕ್ಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 30 ಶತಕಗಳು (375 ಪಂದ್ಯಗಳು)
* ಸನತ್ ಜಯಸೂರ್ಯ (ಶ್ರೀಲಂಕಾ) - 28 (445 ಪಂದ್ಯಗಳು)
2. ಚೇಸಿಂಗ್ನಲ್ಲಿ 'ಚೇಸ್ ಮಾಸ್ಟರ್'
ಗುರಿ ಬೆನ್ನಟ್ಟುವಿಕೆಯಲ್ಲಿ ಕೊಹ್ಲಿ ಅವರ ಪ್ರದರ್ಶನ ಸಾಟಿಯಿಲ್ಲದ್ದು. ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ಮಾಡುವಾಗ 70ಕ್ಕೂ ಹೆಚ್ಚು ಬಾರಿ 50+ (ಅರ್ಧಶತಕ ಅಥವಾ ಶತಕ) ರನ್ ಗಳಿಸಿದ ಏಕೈಕ ಆಟಗಾರ ಇವರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು 'ಚೇಸ್ ಮಾಸ್ಟರ್' ಎಂದು ಕರೆಯಲಾಗುತ್ತದೆ.
3. ಅತಿ ವೇಗವಾಗಿ 8,000 ದಿಂದ 14,000 ರನ್ಗಳ ಮೈಲಿಗಲ್ಲು
ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ (ಕಡಿಮೆ ಇನ್ನಿಂಗ್ಸ್ಗಳಲ್ಲಿ) 8,000, 9,000, 10,000, 11,000, 12,000, 13,000 ಮತ್ತು 14,000 ರನ್ಗಳನ್ನು ಪೂರೈಸಿದ ವಿಶ್ವ ದಾಖಲೆ ಕೊಹ್ಲಿ ಹೆಸರಲ್ಲಿದೆ. ಈ ಎಲ್ಲ ಮೈಲಿಗಲ್ಲುಗಳಲ್ಲಿ ಕ್ರಿಕೆಟ್ ದೇವರು ಅಂತಲೇ ಹೆಸರಾಗಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಇವರು ಮುರಿದಿದ್ದಾರೆ. ಆದರೆ ಸ್ವತಃ ಕೊಹ್ಲಿ ಅವರೇ ಈ ಬಗ್ಗೆ ಇತ್ತೀಚೆಗಷ್ಟೇ ಪ್ರತಿಕ್ರಿಯಿಸಿ ಅವರು ನನ್ನ ಆದಾಧ್ಯ ಅವರಿಗೆ ನನ್ನನ್ನ ಹೋಲಿಕೆ ಮಾಡಬೇಡಿ ಪ್ಲೀಸ್ ಎಂದು ಹೇಳುವ ಮೂಲಕ ದೊಡ್ಡತನ ಮೆರೆದಿದ್ದರು.
4. ಏಕದಿನ ವಿಶ್ವಕಪ್ ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರು ಒಟ್ಟು 765 ರನ್ ಗಳಿಸಿದ್ದಾರೆ. ಇದು ವಿಶ್ವಕಪ್ ಇತಿಹಾಸದಲ್ಲೇ ಒಂದೇ ಆವೃತ್ತಿಯಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್ ಆಗಿದೆ.
5. ಟೆಸ್ಟ್ ನಾಯಕನಾಗಿ ಗರಿಷ್ಠ ದ್ವಿಶತಕಗಳು
ಟೀಮ್ ಇಂಡಿಯಾದ ನಾಯಕನಾಗಿ ಟೆಸ್ಟ್ ಕ್ರಿಕೆಟ್ನಲ್ಲಿ 7 ದ್ವಿಶತಕಗಳನ್ನು ಬಾರಿಸಿದ್ದಾರೆ. ನಾಯಕನಾಗಿ ಇಷ್ಟೊಂದು ದ್ವಿಶತಕ ಸಿಡಿಸಿದ ಮತ್ತೊಬ್ಬ ಕ್ರಿಕೆಟಿಗ ವಿಶ್ವದಲ್ಲೇ ಮತ್ತೊಬ್ಬ ಇಲ್ಲ.
6. ಐಪಿಎಲ್ನಲ್ಲಿ ಗರಿಷ್ಠ ರನ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಕೊಹ್ಲಿ. ಒಂದೇ ಐಪಿಎಲ್ ಋತುವಿನಲ್ಲಿ (2016ರಲ್ಲಿ) 973 ರನ್ ಗಳಿಸಿದ ಇವರ ದಾಖಲೆಯನ್ನು ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ಹೆಚ್ಚು ಕಾಲ ಒಂದೇ ತಂಡದ ಪರ ಆಡಿದ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
7. ಟೆಸ್ಟ್ನಲ್ಲಿ ಭಾರತಕ್ಕೆ ಗರಿಷ್ಠ ನಾಯಕತ್ವದ ಗೆಲುವುಗಳು
ವಿರಾಟ್ ಕೊಹ್ಲಿ ಅವರು ಭಾರತ ಟೆಸ್ಟ್ ತಂಡದ ನಾಯಕನಾಗಿ 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಭಾರತೀಯ ಟೆಸ್ಟ್ ನಾಯಕರ ಪೈಕಿ ಇದು ಅತ್ಯಧಿಕ ಗೆಲುವಿನ ದಾಖಲೆಯಾಗಿದೆ.
8. ಅದ್ಭುತ ಸರಾಸರಿ ಹೊಂದಿರುವ ಆಟಗಾರ
ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ದೇಶಗಳ ವಿರುದ್ಧ ಏಕದಿನ ಮಾದರಿಯಲ್ಲಿ 50ಕ್ಕೂ ಹೆಚ್ಚು ರನ್ ಸರಾಸರಿ ಹೊಂದಿರುವ ಏಕೈಕ ಬ್ಯಾಟರ್ ಇವರಾಗಿದ್ದಾರೆ.
9. ಐಸಿಸಿ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿಗಳು
ಐಸಿಸಿ (ICC) ನೀಡುವ ಪ್ರಮುಖ ಪ್ರಶಸ್ತಿಗಳನ್ನು ಗರಿಷ್ಠ ಬಾರಿ ಪಡೆದ ಆಟಗಾರ ಕೊಹ್ಲಿ. 2011ರಿಂದ 2020ರ ವರೆಗಿನ ದಶಕದ ಅತ್ಯುತ್ತಮ ಕ್ರಿಕೆಟಿಗ (ICC Male Cricketer of the Decade) ಪ್ರಶಸ್ತಿಯೂ ಇವರಿಗೆ ಲಭಿಸಿದೆ.
10. ಮೂರೂ ಮಾದರಿಗಳಲ್ಲೂ 50+ ಸರಾಸರಿ ಕಾಯ್ದುಕೊಂಡ ಸಾಧನೆ
ತಮ್ಮ ವೃತ್ತಿಜೀವನದ ಉನ್ನತ ಹಂತದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಈ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ಒಂದೇ ಸಮಯದಲ್ಲಿ 50ಕ್ಕೂ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದ ಏಕೈಕ ಕ್ರಿಕೆಟಿಗ ಕೊಹ್ಲಿ. 2008ರ 19ರ ವರ್ಷದೊಳಗಿನವರ ವಿಶ್ವಕಪ್ ಗೆಲುವಿನಿಂದ ಹಿಡಿದು 2024ರ ಟಿ20 ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತೀಯ ತಂಡದ ಪ್ರಮುಖ ಅಂಗವಾಗಿದ್ದ ಕೊಹ್ಲಿ, ವಿಶ್ವ ಕ್ರಿಕೆಟ್ನ ನಿಜವಾದ ನಾಯಕ ಹಾಗೂ ಸ್ಫೂರ್ತಿಯಾಗಿದ್ದಾರೆ.


Click it and Unblock the Notifications
