Virat Kohli: ನನ್ನ ಹೃದಯ ಬಡಿತ ಸರಿ ಇದೆಯಾ..! ಕೊಹ್ಲಿ ಮಾತಿನಿಂದ ಆತಂಕಗೊಂಡಿದ್ದ ಅಭಿಮಾನಿಗಳು
ಜೈಪುರದ ಸವಾವ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಆರ್ ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಬಾರಿ ಐಪಿಎಲ್‌ನಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದು ಭಾನುವಾರ ಪಂದ್ಯದಲ್ಲಿ 2025ರ ಐಪಿಎಲ್‌ನ ತಮ್ಮ ಮೂರನೇ ಅರ್ಧಶತಕ ಗಳಿಸಿದರು. ಜೈಪುರದಲ್ಲಿ ಭಾರಿ ಬಿಸಿಲಿನಿಂದ ಒಂದು ಹಂತದಲ್ಲಿ ವಿರಾಟ್ ಕೊಹ್ಲಿ ಸುಸ್ತಾಗಿದ್ದರು, ಕೆಲ ಕಾಲ ಅಭಿಮಾನಿಗಳು ಕೂಡ ಆತಂಕಗೊಂಡರು.
45 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೂ, ಜೈಪುರದಲ್ಲಿ ತೀವ್ರವಾದ ಬಿಸಿಲಿನ ಝಳವು ಬಿಸಿಲಿನ ಪರಿಸ್ಥಿತಿಯನ್ನು ನಿಭಾಯಿಸಲು ಕೊಹ್ಲಿಗೆ ಕಷ್ಟ ಕೊಟ್ಟಿತು. ವಿರಾಟ್ ಕೊಹ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಬಳಿ ತಮ್ಮ ಹೃದಯ ಬಡಿತ ಪರೀಕ್ಷಿಸುವಂತೆ ಕೇಳಿದರು.

15 ನೇ ಓವರ್‌ನಲ್ಲಿ ವನಿಂದು ಹಸರಂಗ ಎಸೆದ ನಾಲ್ಕನೇ ಎಸೆತದಲ್ಲಿ ಕೊಹ್ಲಿ ಎರಡು ರನ್ ಓಡಿದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಸುರಕ್ಷಿತವಾಗಿ ಎರಡು ರನ್ ಪೂರೈಸಿದ ಬಳಿಕ, ಕೊಹ್ಲಿ ದಣಿದಂತೆ ಕಂಡರು, ತಮಾಷೆಯಾಗಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ತಮ್ಮ ಹೃದಯ ಬಡಿತ ಪರೀಕ್ಷಿಸುವಂತೆ ಕೇಳಿದರು.
ಕೊಹ್ಲಿ ಸಂಜುಗೆ "ಹೃದಯ ಬಡಿತ ಪರೀಕ್ಷಿಸಿ" ಎಂದು ಹೇಳುವುದನ್ನು ಸ್ಟಂಪ್ಸ್ ಮೈಕ್‌ನಲ್ಲಿ ಅಭಿಮಾನಿಗಳು ಕೇಳಿದರು. ಪರೀಕ್ಷೆ ಮಾಡಿದ ಸಂಜು ಸ್ಯಾಮ್ಸನ್ ಸರಿಯಾಗಿದೆ ಎಂದು ಉತ್ತರಿಸಿದರು. 15 ಓವರ್ ಮುಗಿದ ಬಳಿಕ ಆರ್ ಸಿಬಿ ಟೈಮ್ ಔಟ್ ತೆಗೆದುಕೊಂಡಿದ್ದರಿಂದ ವಿರಾಟ್ ಕೊಹ್ಲಿ ಸುಧಾರಿಸಿಕೊಳ್ಳಲು ಸಮಯ ಸಿಕ್ಕಿತು. ಚೇತರಿಸಿಕೊಂಡ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮುಂದುವರೆಸಿದರು.
ವಿರಾಟ್ ಕೊಹ್ಲಿ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಜೈಪುರದಲ್ಲಿ ತಾಪಮಾನ ಹೆಚ್ಚಾದಾಗ ಅಭಿಮಾನಿಗಳು ಕೊಹ್ಲಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿ ಹೆಚ್ಚಿನ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿತ್ತು.
ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್
ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ 17.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 175 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಫಿಲ್ ಸಾಲ್ಟ್ 33 ಎಸೆತಗಳಲ್ಲಿ 5 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 65 ರನ್ ಗಳಿಸುವ ಮೂಲಕ ಅಬ್ಬರಿಸಿದರು. ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 28 ಎಸೆತಗಳಲ್ಲಿ ಅಜೇಯ 40 ರನ್ ಗಳಿಸುವ ಮೂಲಕ ಮಿಂಚಿದರು.












Click it and Unblock the Notifications