Virat Kohli: ಈ ತಂಡಕ್ಕಾಗಿ ರಣಜಿಯಲ್ಲಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರಿಷಬ್ ಪಂತ್!
ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿದ್ದರಿಂದ ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಮುಂದಿನ ತಿಂಗಳು ರಣಜಿ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದ್ದು, ಕೊಹ್ಲಿ ದೇಶೀಯ ಕ್ರಿಕೆಟ್‌ಗೆ ಮರಳುವ ಸೂಚನೆ ಸಿಕ್ಕಿದೆ.
ಅಕ್ಟೋಬರ್ 11ರಿಂದ ರಣಜಿ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದ್ದು, ದೆಹಲಿ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎನ್ನುವಂತೆ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರನ್ನು ಹೆಸರಿಸಲಾಗಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) 84 ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಹಿರಿಯ ಆಟಗಾರ ಇಶಾಂತ್ ಶರ್ಮಾ ಅವರನ್ನು ಕೈಬಿಡಲಾಗಿದೆ.

ಸಂಭಾವ್ಯ ತಂಡದಲ್ಲಿ ಹೆಸರಿದ್ದರೂ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ರಣಜಿ ಟ್ರೋಫಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಅಕ್ಟೋಬರ್ 11 ರಂದು ರಣಜಿ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದ್ದು, ದೆಹಲಿ ಮೊದಲ ಪಂದ್ಯದಲ್ಲಿ ಚಂಡೀಗಡ ತಂಡವನ್ನು ಎದುರಿಸಲಿದೆ. ಆದರೆ ಅಕ್ಟೋಬರ್ 16ರಿಂದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದ್ದು, ರಣಜಿ ಪಂದ್ಯದಲ್ಲಿ ಇಬ್ಬರು ಆಡುವುದು ಅನಿಶ್ಚಿತವಾಗಿದೆ.
2018ರ ಬಳಿಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿಗಾಗಿ ದೆಹಲಿ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿಕೊಂಡಿದ್ದಾರೆ. 2012-13ರಲ್ಲಿ ನ್ಯೂಜಿಲೆಂಡ್ ವಿಡುದ್ದದ ಟೆಸ್ಟ್ ಸರಣಿ ಬಳಿಕ ವಿರಾಟ್ ಕೊಹ್ಲಿ, ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ದೆಹಲಿ ತಂಡಕ್ಕಾಗಿ ಆಡಿದ್ದರು. ಇದು ಅವರ ಕೊನೆಯ ರಣಜಿ ಪಂದ್ಯವಾಗಿದೆ.
ಅಪಘಾತವಾದ ಬಳಿಕ ಸಂಪೂರ್ಣವಾಗಿ ಫಿಟ್ ಆಗಿರುವ ರಿಷಬ್ ಪಂತ್ ಸದ್ಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. 2015ರಲ್ಲಿ ಮೊದಲ ರಣಜಿ ಪಂದ್ಯ ಆಡಿದ ಅವರು ಈವರೆಗೂ 17 ಪಂದ್ಯಗಳಲ್ಲಿ ಆಡಿದ್ದಾರೆ. 2016-17 ರ ಋತುವಿನಲ್ಲಿ 48 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲಿ ವೇಗದ ಶತಕ ಸಿಡಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದ್ದು, ಈ ಪಂದ್ಯಾವಳಿಗೆ ಮುನ್ನ ಅಭ್ಯಾಸದ ದೃಷ್ಟಿಯಿಂದ ವಿರಾಟ್ ಕೊಹ್ಲಿ ಒಂದೆರಡು ಪಂದ್ಯಗಳನ್ನು ಆಡುವ ವಿಶ್ವಾಸವಿದೆ. ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವರು ವಿಫಲವಾದರೆ, ರಣಜಿಯಲ್ಲಿ ಆಡಲೇಬೇಕಾದ ಒತ್ತಡ ಕೂಡ ಸೃಷ್ಟಿಯಾಗಬಹುದು.












Click it and Unblock the Notifications