Vinesh Phogat: ಚಿನ್ನ ಗೆಲ್ಲಲು ಒಂದೇ ಮೆಟ್ಟಿಲು; ವಿನೇಶ್ ಫೋಗಟ್‌ಗೆ ಪದಕ ಗ್ಯಾರಂಟಿ
ವಿನೇಶ್ ಪೋಗಟ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ ನಡೆದ 50 ವರ್ಷದೊಳಗಿನ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಚಿನ್ನ ಗೆಲ್ಲಲು ಇನ್ನೊಂದು ಪಂದ್ಯ ಗೆಲ್ಲಬೇಕಿದ್ದು, ಭಾರತಕ್ಕೆ ಬೆಳ್ಳಿ ಪದಕ ಬರುವುದು ಖಚಿತವಾಗಿದೆ.
ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಶುಭದಿನವಾಗಿತ್ತು ಒಂದು ಕಡೆ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡರೆ, ಮತ್ತೊಂದು ಕಡೆ ವಿನೇಶ್ ಫೋಗಟ್ ಕುಸ್ತಿಯಲ್ಲಿ ಮಿಂಚು ಹರಿಸಿದರು. ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ ಆಗಿರುವ ಜಪಾನಿನ ಯುಯಿ ಸುಸಾಕಿ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದ ವಿನೇಶ್ ಫೋಗಟ್ ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಬಂದಿದ್ದರು.

ಸೆಮಿಫೈನಲ್ ರೋಚಕ ಪಂದ್ಯದಲ್ಲಿ ವಿನೇಶ್ ಫೋಗಟ್ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂತರದಲ್ಲಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನ್ನುವ ದಾಖಲೆ ಬರೆದರು. ಲಂಡನ್ 2012ರ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಭಾರತದ ಪರವಾಗಿ ಫೈನಲ್ ಪ್ರವೇಶಿಸಿದ ಮೊದಲ ಕುಸ್ತಿಪಟುವಾಗಿದ್ದರು. ಈ ಸಾಧನೆ ಮಾಡಿದ ಭಾರತದ ಎರಡನೇ ಕುಸ್ತಿಪಡು ವಿನೇಶ್ ಫೋಗಟ್.
ಕಣ್ಣೀರು ಹಾಕಿದ ವಿನೇಶ್ ಫೋಗಟ್
ಸೆಮಿಫೈನಲ್‌ನಲ್ಲಿ ಗೆಲ್ಲುತ್ತಿದ್ದ ವಿನೇಶ್ ಫೋಗಟ್ ಕಣ್ಣೀರು ಹಾಕಿದರು. ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ವಿರುದ್ಧದ ಹೋರಾಟದಲ್ಲಿ ಬಿಜೆಪಿ ಬೆಂಬಲಿಗರಿಂದ ಸಾಕಷ್ಟು ಟೀಕೆ, ಅವಮಾನಕ್ಕೆ ಒಳಗಾಗಿದ್ದ ವಿನೇಶ್ ಫೋಗಟ್ ಈಗ ಒಲಿಂಪಿಕ್‌ನಲ್ಲಿ ಪದಕದ ಮೂಲಕ ಉತ್ತರ ಕೊಟ್ಟಿದ್ದಾರೆ.
ಆಕೆಯ ಜೊತೆಗೆ ಅವರ ವೈಯಕ್ತಿಕ ತರಬೇತುದಾರ ವೊಲರ್ ಅಕೋಸ್ ಸಹ ಕಣ್ಣೀರನ್ನು ತಡೆದುಕೊಳ್ಳದೆ ಅತ್ತರು. ವಿನೇಶ್ ಫೋಗಟ್ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಖಚಿತವಾಗಿದ್ದು, ಇನ್ನೇನಿದ್ದರೂ ಚಿನ್ನದ ಪದಕ್ಕಾಗಿ ಹೋರಾಡಲಿದ್ದಾರೆ. ಫೈನಲ್‌ನಲ್ಲಿ ಸೋತರೂ ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಖಚಿತವಾಗಿದೆ.












Click it and Unblock the Notifications