Virat Kohli: ಹೌದು, ವಿರಾಟ್ ಕೊಹ್ಲಿ ಸ್ವಾರ್ಥಿ! ಟೀಕೆಗಳಿಗೆ ವೆಂಕಟೇಶ್ ಪ್ರಸಾದ್ ಕೊಟ್ಟ ಉತ್ತರ ಇದು
ಕೋಟ್ಯಂತರ ಅಭಿಮಾನಿಗಳ ಕನಸು ನವೆಂಬರ್ 5 ರಂದು ಈಡೇರಿದೆ, ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ಸಾಧನೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಹುಟ್ಟುಹಬ್ಬದ ದಿನವೇ ಕೊಹ್ಲಿ 49ನೇ ಶತಕ ಗಳಿಸಿದ್ದರು.
ಕೊಹ್ಲಿ ಆಟಕ್ಕೆ ಮನಸೋತಿದ್ದ ಸಚಿನ್ ತೆಂಡೂಲ್ಕರ್ ಕೂಡ ಅಭಿನಂದನೆ ಸಲ್ಲಿಸಿ ಆದಷ್ಟು ಬೇಗ 50ನೇ ಶತಕ ಬಾರಿಸುವಂತೆ ಹಾರೈಸಿದ್ದರು. ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಕೊಹ್ಲಿ ಆಟವನ್ನು ಮನಸಾರೆ ಮೆಚ್ಚಿಕೊಂಡಿದ್ದು, ಇನ್ನಷ್ಟು ದಾಖಲೆ ನಿರ್ಮಿಸಿ ಎಂದು ಹಾರೈಸಿದ್ದಾರೆ.

ಆದರೆ, ಜನಾರ್ಧನನ್ನು ಮೆಚ್ಚಿಸಿದರೂ ಜನರನ್ನು ಮೆಚ್ಚಿಸಲಾಗದು ಎನ್ನುವ ಗಾದೆ ಕೊಹ್ಲಿ ವಿಚಾರದಲ್ಲೂ ನಿಜವಾಗಿದೆ. ಕೆಲವರಿಗೆ ಕೊಹ್ಲಿ ಶತಕ ಇಷ್ಟವಾಗಿಲ್ಲ ಎನಿಸುತ್ತದೆ. ಅದಕ್ಕೆ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು, ಅವರು ವೈಯಕ್ತಿತ ದಾಖಲೆಗಳಿಗಾಗಿ ಆಡುತ್ತಾರೆ, ತಂಡಕ್ಕಾಗಿ ಆಡುವುದಿಲ್ಲ ಎಂದು ಟೀಕಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್ ಶರ್ಮಾ, ಪಿಚ್ ಕಠಿಣವಾಗಿದ್ದ ಕಾರಣ ಕೊನೆಯವರೆಗೂ ಬ್ಯಾಟಿಂಗ್ ಮಾಡುವಂತೆ ಕೊಹ್ಲಿ ಮತ್ತು ಶ್ರೇಯಸ್‌ಗೆ ಹೇಳಿದ್ದಾಗಿ ತಿಳಿಸಿದ್ದರೂ, ಕೊಹ್ಲಿ ಬಗ್ಗೆ ಟೀಕೆಗಳು ನಿಲ್ಲಲಿಲ್ಲ. ಎಕ್ಸ್ (ಟ್ವಿಟರ್) ನಲ್ಲಿ ಕೊಹ್ಲಿಯನ್ನು ಸ್ವಾರ್ಥಿ (ಸೆಲ್ಫಿಷ್) ಎಂದು ಟೀಕಿಸಲಾಗಿತ್ತು.
Hearing funny arguments about Virat Kohli being Selfish and obsessed with personal milestone.
— Venkatesh Prasad (@venkateshprasad) November 6, 2023
Yes Kohli is selfish, selfish enough to follow the dream of a billion people, selfish enough to strive for excellence even after achieving so much, selfish enough to set new benchmarks,… pic.twitter.com/l5RZRf7dNx
ವಿರೋಧಿಗಳಿಗೆ ಉತ್ತರ ಕೊಟ್ಟ ವೆಂಕಟೇಶ್ ಪ್ರಸಾದ್
ಇನ್ನು ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಮಾಜಿ ಕ್ರಿಕೆಟಿಗ, ಕನ್ನಡಿಗ ವೆಂಕಟೇಶ್ ಪ್ರಸಾದ್ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ. "ವಿರಾಟ್ ಕೊಹ್ಲಿ ಸ್ವಾರ್ಥಿ ಮತ್ತು ವೈಯಕ್ತಿಕ ಮೈಲಿಗಲ್ಲುಗಳಿಗಾಗಿ ಆಡುತ್ತಾರೆ ಎನ್ನುವ ಹಾಸ್ಯಾಸ್ಪದ ವಾದವನ್ನು ಕೇಳಿದ್ದೇನೆ, ಹೌದು, ವಿರಾಟ್ ಕೊಹ್ಲಿ ಸ್ವಾರ್ಥಿ. ಕೋಟ್ಯಂತರ ಜನರ ಕನಸುಗಳನ್ನು ಅನುಸರಿಸುವಷ್ಟು ಸ್ವಾರ್ಥಿ, ಇಷ್ಟು ಸಾಧಿಸಿದ ನಂತರವೂ ಶ್ರೇಷ್ಠತೆಗಾಗಿ ಶ್ರಮಿಸುವಷ್ಟು ಸ್ವಾರ್ಥಿ, ಹೊಸ ಮಾನದಂಡಗಳನ್ನು ಹೊಂದಿಸುವಷ್ಟು ಸ್ವಾರ್ಥಿ, ತನ್ನ ತಂಡವನ್ನು ಗೆಲ್ಲುವಷ್ಟು ಸ್ವಾರ್ಥಿ. ಹೌದು, ಕೊಹ್ಲಿ ಸ್ವಾರ್ಥಿ." ಎಂದು ಟ್ವೀಟ್ ಮಾಡುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.
ಕೊಹ್ಲಿ ವಿರುದ್ಧ ಟೀಕೆಗಳು ಇದೇ ಮೊದಲಲ್ಲ, 2020-2021ರಲ್ಲಿ ಅವರು ಫಾರ್ಮ್ ಕಳೆದುಕೊಂಡಿದ್ದಾಗ ಕೂಡ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅವರನ್ನು ತಂಡದಿಂದ ಕೈಬಿಡುವಂತೆ ಹಲವು ಮಾಜಿ ಕ್ರಿಕೆಟಿಗರು ಕೂಡ ಒತ್ತಾಯಿಸಿದ್ದಾರೆ, ಆದರೆ ಕೊಹ್ಲಿ ಎಲ್ಲರ ಟೀಕೆಗಳಿಗೂ ಬ್ಯಾಟ್‌ನಿಂದಲೇ ಉತ್ತರಿಸಿದ್ದರು.
2022ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ್ದ ಕೊಹ್ಲಿ ಇನ್ನಿಂಗ್ಸ್ ಅವರ ಸಾಮರ್ಥ್ಯ ಏನು ಎನ್ನುವುದನ್ನು ಮತ್ತೆ ಜಗತ್ತಿಗೆ ತಿಳಿಸಿತ್ತು. ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಏಳು ಪಂದ್ಯಗಳಲ್ಲಿ 523 ರನ್ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಈಗಾಗಲೇ ಎರಡು ಶತಕ ಗಳಿಸಿರುವ ಕೊಹ್ಲಿ, ಮೂರು ಬಾರಿ ಶತಕದ ಸನಿಹ ಬಂದು ಔಟಾಗಿದ್ದಾರೆ, ಇದೇ ವಿಶ್ವಕಪ್‌ನಲ್ಲಿ ಕೊಹ್ಲಿ ಏಕದಿನ ಮಾದರಿಯಲ್ಲಿ 50ನೇ ಶತಕ ಗಳಿಸಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಆಸೆಯಾಗಿದೆ.












Click it and Unblock the Notifications