Vaibhav Sooryavanshi: ವೈಭವ್ ಸೂರ್ಯವಂಶಿ ಪ್ಲೇಯಿಂಗ್ 11ನಿಂದ ಔಟ್.. ಆರ್.ಅಶ್ವಿನ್ ಹೇಳಿದ್ದೇನು?
Vaibhav Sooryavanshi: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕುರಿತು ಭಾರತೀಯ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಮುಕ್ತವಾಗಿ ಮಾತನಾಡಿದ್ದಾರೆ. ಆ ಆಟಗಾರ ಎಂಟ್ರಿ ಕೊಟ್ರೆ ವೈಭವ್ ಹೊರಗಡೆ ಕೂರಲೇಬೇಕಾಗುತ್ತದೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಾದ್ರೆ ಇದರ ಹಿಂದಿನ ಉದ್ದೇಶ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಶ್ಲಾಘಿಸಿರುವ ಆರ್.ಅಶ್ವಿನ್ ಅವರು, ಮುಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ಕಮ್‌ಬ್ಯಾಕ್ ಮಾಡಿದರೆ ವೈಭವ್ ಬದಲಿಗೆ ಸಂಜು ಸ್ಯಾಮ್ಸನ್ ಅವರೇ ಓಪನರ್ ಆಗಿ ಕಣಕ್ಕಿಳಿಯಬೇಕು ಮತ್ತು ವೈಭವ್ ಪ್ಲೇಯಿಂಗ್ 11ನಿಂದ ಹೊರಗುಳಿಯಬೇಕಾಗುತ್ತದೆ ಎಂದು ನೇರವಾಗಿ ಹೇಳಿದ್ದಾರೆ.

3ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್
ಸರಣಿಯ 3ನೇ ಪಂದ್ಯದಲ್ಲಿ ಇಶಾನ್ ಕಿಶನ್ ಗಾಯಗೊಂಡಿದ್ದರಿಂದ ಪ್ಲೇಯಿಂಗ್ ಇಲೆವೆನ್‌ಗೆ ಸೇರ್ಪಡೆಯಾಗಿದ್ದ ವೈಭವ್ ಸೂರ್ಯವಂಶಿ, ಓಪನರ್ ಆಗಿ ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿದ್ದರು. ಅಭಿಷೇಕ್ ಶರ್ಮಾ ಜೊತೆಗೂಡಿ ಮೊದಲ ವಿಕೆಟ್‌ಗೆ 133 ರನ್‌ಗಳ ದಾಖಲೆಯ ಪಾಲುದಾರಿಕೆ ಹಂಚಿಕೊಳ್ಳುವ ಮೂಲಕ ಭಾರತ ತಂಡವು 199 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಲು ನೆರವಾಗಿದ್ದರು.
ವೈಭವ್ ಆಟ ಮೆಚ್ಚಿದ ಆರ್.ಅಶ್ವಿನ್
ವೈಭವ್ ಸೂರ್ಯವಂಶಿ ಅವರ ಆಟವನ್ನು ಮೆಚ್ಚಿದ ಆರ್.ಅಶ್ವಿನ್, 'ಐಪಿಎಲ್‌ನಿಂದಲೂ ಅವರು ಇಂತಹ ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ವೈಭವ್ ಅದ್ಭುತ ಪ್ರತಿಭೆ ಮತ್ತು ಅವರ ಭವಿಷ್ಯ ತುಂಬಾ ಉಜ್ವಲವಾಗಿದೆ,' ಎಂದು ಸೋನಿಲಿವ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಂಡದ ಸಂಯೋಜನೆ ಬಗ್ಗೆ ಅಶ್ವಿನ್ ಲೆಕ್ಕಾಚಾರ ಏನು?
ಮುಂದಿನ ಪಂದ್ಯದ ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿದ ಅಶ್ವಿನ್, 'ಇಶಾನ್ ಕಿಶನ್ ಲಭ್ಯವಿಲ್ಲದಿದ್ದಾಗ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕಕ್ಕೆ ಇಳಿದು ವೈಭವ್ ಅವರಿಗೆ ಓಪನಿಂಗ್ ನೀಡಿದ್ದು ಸೂಕ್ತವಾಗಿತ್ತು. ಏಕೆಂದರೆ ಸಂಜುಗೆ ಯಾವುದೇ ಕ್ರಮಾಂಕದಲ್ಲಾದರೂ ಪರಿಸ್ಥಿತಿಯನ್ನು ನಿಭಾಯಿಸುವ ಅನುಭವವಿದೆ. ಆದರೆ, ಮುಂದಿನ ಪಂದ್ಯಕ್ಕೆ ಇಶಾನ್ ತಂಡಕ್ಕೆ ವಾಪಸಾದರೆ ವೈಭವ್ ಹೊರಗುಳಿಯಬೇಕಾಗುತ್ತದೆ ಹಾಗೂ ಸಂಜು ತಮಗೆ ಸೂಕ್ತವಾದ ಓಪನಿಂಗ್ ಸ್ಥಾನಕ್ಕೆ ಮರಳಬೇಕು,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
15 ವರ್ಷದ ಬಾಲಕನ ಮೇಲೆ ಒತ್ತಡ ಹೇರದಂತೆ ಸಲಹೆ
ಅಷ್ಟೇ ಅಲ್ಲದೆ, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮೇಲೆ ತಕ್ಷಣವೇ ಅತಿಯಾದ ನಿರೀಕ್ಷೆಗಳ ಭಾರ ಹೇರಬಾರದು ಎಂದು ಅಶ್ವಿನ್ ಕ್ರೀಡಾಭಿಮಾನಿಗಳಲ್ಲಿ ಮತ್ತು ವಿಶ್ಲೇಷಕರಲ್ಲಿ ವಿನಂತಿಸಿಕೊಂಡಿದ್ದಾರೆ. 'ವೈಭವ್ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ನ ದೊಡ್ಡ ಸ್ಟಾರ್ ಆಗುವುದರಲ್ಲಿ ಅನುಮಾನವಿಲ್ಲ. ಆದರೆ ಈಗಲೇ ಅವರ ಕುರಿತು ದೊಡ್ಡ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ. ಅವರು ಯಾವುದೇ ಒತ್ತಡವಿಲ್ಲದೆ ತಮ್ಮ ಕ್ರಿಕೆಟ್ ಅನ್ನು ಆನಂದಿಸಲು ಬಿಡಬೇಕು,' ಎಂದು ಹೇಳಿದ್ದಾರೆ.
'ನಾನು 16 ವರ್ಷದವನಿದ್ದಾಗ ಚೆನ್ನೈ ಮೈದಾನಗಳಲ್ಲಿ ಆಟವಾಡುತ್ತಾ ಕ್ರಿಕೆಟ್ ಆನಂದಿಸುತ್ತಿದ್ದೆ. ಅವರು ಮೂರನೇ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದಾರೆ. ಆದರೆ ನಾವು ತಕ್ಷಣವೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಅವರ ಅದ್ಭುತ ಆಟವನ್ನು ನೋಡಿ ಆನಂದಿಸೋಣ,' ಎಂದು ಆರ್. ಅಶ್ವಿನ್ ಅವರು ಹೇಳಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಆರ್.ಅಶ್ವಿನ್ ಅವರ ಈ ಹೇಳಿಕೆ ಪ್ರಕಾರ, ಅಕ್ಟೋಬರ್ 30ರಂದು ನಡೆಯುವ ನಾಲ್ಕನೇ ಪಂದ್ಯಕ್ಕೆ ಇಶಾನ್ ಕಿಶನ್ ಮರಳಿದರೆ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಅವರು ಹೊರಗುಳಿಯಲಿದ್ದಾರೆ. ಇಲ್ಲದಿದ್ದರೆ ಅವರೇ ಮುಂದುವರೆಯಲಿದ್ದಾರೆ.


Click it and Unblock the Notifications
