Vaibhav: ಐಪಿಎಲ್‌ನಲ್ಲಿ ವಿಶ್ವದಾಖಲೆ ಮಾಡಿದ ವಂಡರ್ ಕಿಡ್ 15 ವರ್ಷದ ವೈಭವ್ ಸೂರ್ಯವಂಶಿ
Vaibhav Sooryavanshi: ಐಪಿಎಲ್ 2026ರ ಆವೃತ್ತಿಯಲ್ಲಿ 15 ವರ್ಷ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟದ ಮೂಲಕ ದಾಖಲೆಗಳನ್ನು ಮಾಡುತ್ತಾ ಕ್ರಿಕೆಟ್ ದಿಗ್ಗಜರನ್ನ ಬೆರಗುಗೊಳಿಸಿದ್ದಾರೆ. ಇದೀಗ ಅವರು ಐತಿಹಾಸಿದ ವಿಶ್ವದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡು ಗಮನ ಸೆಳೆದಿದ್ದಾರೆ. ಈ ಕುರಿತು ಸಂಪೂರ್ಭ ಮಾಹಿತಿ ಇಲ್ಲಿದೆ ನೋಡಿ.
ಕ್ರಿಕೆಟ್ ಲೋಕದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಪ್ರತಿದಿನವೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಇವರು ಇದೀಗ ಮತ್ತೊಂದು ಐತಿಹಾಸಿಕ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ವಿಶ್ವದಾಖಲೆ ಬರೆದ ವೈಭವ್
ಶನಿವಾರ (ಮೇ 09) ನಡೆದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ವೈಭವ್ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವ ದಾಖಲೆ ನಿರ್ಮಿಸಿದರು. ಕೇವಲ 514 ಎಸೆತಗಳಲ್ಲಿ 100 ಸಿಕ್ಸರ್‌ಗಳ ಗಡಿಯನ್ನು ದಾಟುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೈಲಿಗಲ್ಲನ್ನು ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
40ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ
40ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಐಪಿಎಲ್ ಶತಕಗಳನ್ನು ಸಿಡಿಸಿದ ಏಕೈಕ ಬ್ಯಾಟರ್ ಇವರಾಗಿದ್ದಾರೆ. 2025ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಹಾಗೂ 2026ರ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 36 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲೇ ದಿಗ್ಗಜರ ದಾಖಲೆಗಳನ್ನು ಧೂಳೀಪಟ ಮಾಡುತ್ತಿರುವ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದ ಮುಂದಿನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ.
ಜಿಟಿ ವಿರುದ್ಧ ಮಿಂಚಿದ ವಂಡರ್ ಕಿಡ್
ವೈಭವ್ ಸೂರ್ಯವಂಶಿ ಅವರು ಮೇ 09ರಂದು ನಡೆದ ಜಿಟಿ ವಿರುದ್ಧದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 36 ರನ್ ಸಿಡಿಸಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು. ಸೂರ್ಯವಂಶಿ ಬಾರಿಸಿದ ಎಲ್ಲಾ ಮೂರು ಸಿಕ್ಸರ್‌ಗಳು ಪವರ್‌ಪ್ಲೇ ಅವಧಿಯಲ್ಲೇ ಬಂದವು.
ಈ ಮೂಲಕ ಅವರು ಐಪಿಎಲ್ ಸೀಸನ್‌ವೊಂದರಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕೇವಲ 15 ವರ್ಷದ ಈ ಬಾಲಕ ಪವರ್‌ಪ್ಲೇ ಅವಧಿಯಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವುದು ಕ್ರಿಕೆಟ್ ದಿಗ್ಗಜರನ್ನು ಅಚ್ಚರಿಗೊಳಿಸಿದೆ.
ಸೀಸನ್‌ವೊಂದ ಪವರ್‌ಪ್ಲೇನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದವರು
* ವೈಭವ್ ಸೂರ್ಯವಂಶಿ - 30* (2026)
* ಅಭಿಷೇಕ್ ಶರ್ಮಾ - 29 (2024)
* ಅಭಿಷೇಕ್ ಶರ್ಮಾ - 27* (2026)
* ಸನತ್ ಜಯಸೂರ್ಯ - 22 (2008)
* ಟ್ರಾವಿಸ್ ಹೆಡ್ - 22 (2024)
* ಯಶಸ್ವಿ ಜೈಸ್ವಾಲ್ - 22 (2025)
ಗುಜರಾತ್ ವಿರುದ್ಧ ಆರ್‌ಆರ್ ಹೀನಾಯ ಸೋಲು
ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ (ಮೇ 09) ನಡೆದ ಐಪಿಎಲ್ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಭರ್ಜರಿ ಅರ್ಧಶತಕ ಹಾಗೂ ವಾಷಿಂಗ್ಟನ್ ಸುಂದರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ಹಂಗಾಮಿ ನಾಯಕ ಯಶಸ್ವಿ ಜೈಸ್ವಾಲ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಭರ್ಜರಿ ಅರ್ಧಶತಕಗಳ ನಡವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ 230 ರನ್‌ಗಳ ಗುರಿ ಮುಟ್ಟುವಲ್ಲಿ ವಿಫಲವಾಗುವ ಮೂಲಕ ಆರ್‌ಆರ್ ಹೀನಾಯ ಸೋಲನುಭವಿಸಿತು. ಜಿಟಿ ನೀಡಿದ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 16.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು.












Click it and Unblock the Notifications