Vaibhav Sooryavanshi: ಶತಕ ಜಸ್ಟ್ ಮಿಸ್.. ಭರ್ಜರಿ ಅರ್ಧಶತಕದಿಂದ ಮತ್ತೊಂದು ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ, ನಂ.1
Vaibhav Sooryavanshi: ಹರಾರೆಯಲ್ಲಿ ಭಾನುವಾರ (ಜುಲೈ 26) ಜಿಂಬಾಬ್ವೆ ಹಾಗೂ ಭಾರತ ತಂಡದ ನಡುವೆ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ 'ವಂಡರ್ ಕಿಡ್' 15 ವರ್ಷದ ವೈಭವ್ ಸೂರ್ಯವಂಶಿ ಅವರು ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಟೀಮ್ ಇಂಡಿಯಾ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಆಟದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ವೈಭವ್ ಕೇವಲ 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 81 ರನ್ ಸಿಡಿಸಿ ಹೊರ ದಾಖಲೆ ಬರೆದಿದ್ದಾರೆ.

ಮತ್ತೊಂದು ಸಾಧನೆ ಮಾಡಿದ ವೈಭವ್
ಹರಾರೆಯಲ್ಲಿ ಭಾನುವಾರ ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಭರ್ಜರಿ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 15 ವರ್ಷದ ಈ ಬಾಲಕ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮೈದಾನದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ ವೈಭವ್ ಜಿಂಬಾಬ್ವೆ ಬೌಲರ್‌ಗಳನ್ನು ಧೂಳೀಪಟ ಮಾಡಿದರು. ಈ ಮೂರು ಪಂದ್ಯಗಳ ಸರಣಿಯಲ್ಲಿ ಅವರು ಸಿಡಿಸಿದ ಎರಡನೇ ಅರ್ಧಶತಕ ಇದಾಗಿದೆ.
ವೈಭವ್ ಸೂರ್ಯವಂಶಿ ಹೊಸ ದಾಖಲೆ
ಈ ಭರ್ಜರಿ ಇನ್ನಿಂಗ್ಸ್‌ನ ನೆರವಿನಿಂದ ವೈಭವ್ ಸೂರ್ಯವಂಶಿ 16 ವರ್ಷ ತುಂಬುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಅರ್ಧಶತಕ ಸಿಡಿಸಿದ ಪೂರ್ಣ ಪ್ರಮಾಣದ ಐಸಿಸಿ ಸದಸ್ಯ ರಾಷ್ಟ್ರದ ಏಕೈಕ ಬ್ಯಾಟರ್ ಎಂಬ ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಸೂರ್ಯವಂಶಿಗೂ ಮುನ್ನ 16 ವರ್ಷ ತುಂಬುವ ಮೊದಲೇ ಅರ್ಧಶತಕ ಸಿಡಿಸಿದ ಮತ್ತೊಬ್ಬ ಆಟಗಾರ ಎಂದರೆ ನೇಪಾಳದ ಕುಶಾಲ್ ಮಲ್ಲಾ ಮಾತ್ರ.
ತಂಡದಲ್ಲಿ ಪ್ರಮುಖ ಬದಲಾವಣೆ
ಪಂದ್ಯದ ವಿಷಯಕ್ಕೆ ಬರುವುದಾದರೆ ಮೂರನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ತಂಡವು ವೈಭವ್ ಆಕ್ರಮಣಕಾರಿ ಆಟದ ನೆರವಿನಿಂದ 190 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಇನ್ನೂ ತಂಡದಲ್ಲಿ ಗಾಯಗೊಂಡ ಪ್ರಿನ್ಸ್ ಯಾದವ್ ಅವರ ಬದಲಿಗೆ ವೇಗಿ ಅಶೋಕ್ ಶರ್ಮಾ ಅವರನ್ನು ಹಾಗೂ ಶಿವಂ ದುಬೆ ಅವರ ಸ್ಥಾನಕ್ಕೆ ಸೂರ್ಯಾಂಶ್ ಶೆಡ್ಗೆ ಅವರನ್ನ ಸೇರಿಸಿಕೊಳ್ಳಲಾಗಿದೆ.
ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
ಟಾಸ್ ವೇಳೆ ಈ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು, 'ನಾವು ಅದೇ ಪಿಚ್‌ನಲ್ಲಿ ಆಡುತ್ತಿರುವುದರಿಂದ ಪಂದ್ಯ ಸಾಗುತ್ತಿದ್ದಂತೆ ಪಿಚ್ ಮತ್ತಷ್ಟು ನಿಧಾನಗತಿಯಾಗಬಹುದು. ಇದನ್ನ ಗಮನದಲ್ಲಿಟ್ಟುಕೊಂಡು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವೆ,' ಎಂದು ಹೇಳಿದರು.
ನಿನ್ನೆ ಇದೇ ಪಿಚ್‌ನಲ್ಲಿ ಆಡಿರುವುದು ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಯ್ಯರ್, 'ಖಂಡಿತವಾಗಿ ನಾವು ಸ್ಕೋರ್ ಬೋರ್ಡ್‌ನಲ್ಲಿ 220 ರನ್ ಕಲೆಹಾಕಿದೆವು. ನಮ್ಮ ಆಟಗಾರರ ಅದ್ಭುತ ಪ್ರದರ್ಶನದಿಂದ ನಮಗೆ ಉತ್ತಮ ಆರಂಭ ಸಿಕ್ಕಿತು. ಇಂದು ಬೆಳಗ್ಗೆ ಬಂದು ಆ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ರೋಮಾಂಚನವೆನಿಸುತ್ತದೆ. ಇಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನವನ್ನು ಪುನರಾವರ್ತಿಸಲು ಬಯಸುತ್ತೇವೆ,' ಎಂದು ಹೇಳಿದರು.
'ನಾವು ಎಷ್ಟು ಬೇಗ ಪಿಚ್‌ಗೆ ಹೊಂದಿಕೊಳ್ಳುತ್ತೇವೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ. ಇದು ನಿನ್ನೆಯಂತೆಯೇ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಾವು ಎಷ್ಟು ಬೇಗ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇವೆಯೋ ಅದು ನಮಗೆ ಅಷ್ಟು ಒಳ್ಳೆಯದು. ನಂತರ ಉತ್ತಮ ಸ್ಕೋರ್ ಕಲೆಹಾಕಲು ಪ್ರಯತ್ನಿಸುತ್ತೇವೆ. ಇನ್ನೂ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದೇವೆ. ಪ್ರಿನ್ಸ್ ಯಾದವ್ ಹೊರಗುಳಿದಿದ್ದು, ಅವರ ಜಾಗಕ್ಕೆ ಅಶೋಕ್ ಶರ್ಮಾ ಬಂದಿದ್ದಾರೆ. ಮತ್ತೊಂದೆಡೆ ಶಿವಂ ದುಬೆ ಅವರ ಸ್ಥಾನಕ್ಕೆ ಸೂರ್ಯಾಂಶ್ ಶೆಡ್ಗೆ ಬಂದಿದ್ದಾರೆ,' ಎಂದು ಹೇಳಿದರು.
ಭಾರತ ಮತ್ತು ಜಿಂಬಾಬ್ವೆ ಪ್ಲೇಯಿಂಗ್ 11
ಭಾರತ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ರವಿ ಬಿಷ್ಣೋಯ್, ಅಶೋಕ್ ಶರ್ಮಾ, ಯಶ್ ಠಾಕೂರ್, ಮಯಾಂಕ್ ಯಾದವ್.
ಜಿಂಬಾಬ್ವೆ ಪ್ಲೇಯಿಂಗ್ 11: ಬ್ರಿಯಾನ್ ಬೆನೆಟ್, ಬೆನ್ ಕರನ್, ಡಿಯಾನ್ ಮೈಯರ್ಸ್, ಸಿಕಂದರ್ ರಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಶೆ ಮರುಮನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ, ವೆಲ್ಲಿಂಗ್ಟನ್ ಮಸಕಡ್ಜ, ಬ್ಲೆಸ್ಸಿಂಗ್ ಮುಜರಾಬಾನಿ.


Click it and Unblock the Notifications
