ನಾನು ಬ್ಯಾಟರ್ ಅಷ್ಟೇ ಅಲ್ಲ, ವಿಕೆಟ್ ಟೇಕರ್ ಬೌಲರ್ ಕಣ್ರೀ: ನಾಯಕ ಇಶಾನ್ ಕಿಶನ್‌ಗೆ ವೈಭವ್ ಸೂರ್ಯವಂಶಿ ಅವಾಜ್..
Vaibhav Sooryavanshi: ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮೂಲಕ ಹೆಸರಾಗಿರುವ ಟೀಮ್ ಇಂಡಿಯಾ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಸದ್ಯ ದುಲೀಪ್ ಟ್ರೋಫಿಯಲ್ಲಿ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ಇನ್ನೂ ಈ ಟೂರ್ನಿಯ ಪಂದ್ಯದಲ್ಲಿ ತಮ್ಮ ಬೌಲಿಂಗ್ ಪ್ರದರ್ಶನದ ಬಗ್ಗೆ ವೈಭವ್ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಇದೀಗ ಭಾರೀ ವೈರಲ್ ಆಗುತ್ತಿದೆ.
ದುಲೀಪ್ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಆರಂಭಕ್ಕೂ ಮುನ್ನ ಈಸ್ಟ್ ಝೋನ್ ತಂಡದ ಉಪನಾಯಕ, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ತಮ್ಮ ಬೌಲಿಂಗ್ ಪ್ರದರ್ಶನದ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ನಾಯಕ ಇಶಾನ್ ಕಿಶನ್ ಅವರಿಗೆ ತಮಗಿರುವ ಬೌಲಿಂಗ್ ಸಾಮರ್ಥ್ಯ ಮತ್ತು ವಿಕೆಟ್ ಪಡೆಯುವ ಕಲೆ ತಿಳಿದಿರಲಿಲ್ಲ ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ.

ಬೌಲಿಂಗ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ
ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ನಾರ್ತ್ ಈಸ್ಟ್ ಝೋನ್ ವಿರುದ್ಧ ಈಸ್ಟ್ ಝೋನ್ ತಂಡವು 210 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಎಡಗೈ ಸ್ಪಿನ್ನರ್ ಆಗಿ ಕೇವಲ 3 ಓವರ್ ಬೌಲಿಂಗ್ ಮಾಡಿದ ವೈಭವ್, ಪ್ರಮುಖ 2 ವಿಕೆಟ್‌ಗಳನ್ನು ಕಬಳಿಸಿ ಎದುರಾಳಿ ತಂಡಕ್ಕೆ ಆಘಾತ ನೀಡಿದರು.
ಈ ಬಗ್ಗೆ ಮಾತನಾಡಿದ ವೈಭವ್ ಸೂರ್ಯವಂಶಿ ಅವರು, 'ಬೌಲರ್‌ಗಳಿಗೆ ಬ್ಯಾಟಿಂಗ್ ಮಾಡಲು ಎಷ್ಟು ಇಷ್ಟವೋ, ಬ್ಯಾಟರ್‌ಗಳಿಗೂ ಬೌಲಿಂಗ್ ಮಾಡುವುದೆಂದರೆ ಅಷ್ಟೇ ಇಷ್ಟ. ಎದುರಾಳಿ ತಂಡದ ವಿಕೆಟ್‌ಗಳು ಬೀಳದೇ ಇದ್ದಾಗ ಇಶಾನ್ ಭಯ್ಯ ನನ್ನನ್ನು ಬೌಲಿಂಗ್‌ಗೆ ಕರೆದರು. ಆ ಸಮಯದಲ್ಲಿ ಇಶಾನ್ ಅವರು ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಭಾವಿಸಿದ್ದರು. ಆದರೆ ನಾನು ವಿಕೆಟ್ ಟೇಕರ್ ಬೌಲರ್ ಎಂಬುದು ಅವರಿಗೆ ಗೊತ್ತಿರಲಿಲ್ಲ,' ಎಂದು ತಮಾಷೆಯಾಗಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಪಂದ್ಯದ ಚಿತ್ರಣ ಬದಲಿಸಿದ ವಂಡರ್ ಕಿಡ್
'ನನಗೆ ಕೇವಲ 3 ಓವರ್ ಬೌಲಿಂಗ್ ಮಾಡಲು ಸಿಗುತ್ತದೆ ಎಂಬುದು ಗೊತ್ತಿತ್ತು. 5 ವಿಕೆಟ್ ತೆಗೆದರೂ ಅಷ್ಟೇ ಓವರ್ ಸಿಗುವುದರಿಂದ, ಒಂದೇ ಸ್ಪಾಟ್ ಗುರಿಯಾಗಿಸಿಕೊಂಡು ಅತ್ಯುತ್ತಮವಾಗಿ ಬೌಲಿಂಗ್ ಮಾಡಬೇಕು ಎನ್ನುವುದು ನನ್ನ ಯೋಜನೆಯಾಗಿತ್ತು,' ಎಂದು ವೈಭವ್ ಸೂರ್ಯವಂಶಿ ಅವರು ಹೇಳಿದ್ದಾರೆ.
ಬ್ಯಾಟಿಂಗ್ ವೈಫಲ್ಯ.. ಬೌಲಿಂಗ್‌ನಲ್ಲಿ ಮಿಂಚಿಂಗ್
ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವೈಭವ್‌ಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ (ಕೇವಲ 8 ರನ್ ಗಳಿಸಿದ್ದರು). ಆದರೆ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದ್ದು ತಮಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ. ಬಿಹಾರ ಮೂಲದ ರಾಜಸ್ಥಾನ್ ರಾಯಲ್ಸ್ ಆಟಗಾರನಾದ ವೈಭವ್ ಅವರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು 4ನೇ ವಿಕೆಟ್ ಆಗಿದೆ. ಇನ್ನು ದುಲೀಪ್ ಟ್ರೋಫಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಈಸ್ಟ್ ಝೋನ್ ತಂಡವು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಸೌತ್ ಝೋನ್ ತಂಡವನ್ನು ಎದುರಿಸಲಿದೆ.
ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಹೆಸರಾದ ವೈಭವ್
ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆಗಳಲ್ಲಿ ಗಮನ ಸೆಳೆಯುತ್ತಿರುವ ಆಟಗಾರ. ಅತಿ ಚಿಕ್ಕ ವಯಸ್ಸಿನಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿರುವ ಅವರು, ದೇಶೀಯ ಹಾಗೂ ಟಿ-20 ಕ್ರಿಕೆಟ್‌ನಲ್ಲಿ ಛಾಪು ಮೂಡಿಸುತ್ತಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಶೈಲಿ, ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಅವರ ಪ್ರಮುಖ ಬಲಗಳಾಗಿವೆ.
ಯಾವುದೇ ಭಯವಿಲ್ಲದೆ ಹಿರಿಯ ಆಟಗಾರರೊಂದಿಗೆ ಅಖಾಡಕ್ಕಿಳಿಯುವ ವೈಭವ್, ಭವಿಷ್ಯದಲ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗುವ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಅವರ ಬೆಳವಣಿಗೆಯನ್ನು ಇಡೀ ಕ್ರಿಕೆಟ್ ಜಗತ್ತೇ ಕುತೂಹಲದಿಂದ ಗಮನಿಸುತ್ತಿದೆ. ಈಗಾಗಲೇ ಅವರ ಆಟಕ್ಕೆ ದಿಗ್ಗಜರು ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಜೊತೆಗೆ ಅವರ ಮುಂದಿನ ಭವಿಷ್ಯವನ್ನು ಕೂಡ ಹಲವರು ನುಡಿದಿದ್ದಾರೆ.


Click it and Unblock the Notifications
